ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಮೋದಿ-ಪುಟಿನ್
ನವದೆಹಲಿ, ಅಕ್ಟೋಬರ್ 5: ಎರಡು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಮಾತುಕತೆ ನಡೆಸಿದ್ದಾರೆ.
ಈ ಮಾತುಕತೆಯು ಭಾರತದ ರಕ್ಷಣಾ ವ್ಯವಸ್ಥೆಗೆ ಬಹಳ ಮುಖ್ಯವಾಗಿದ್ದು, ಭೇಟಿ ವೇಳೆ 5 ಶತಕೋಟಿ ಮೌಲ್ಯದ ಎಸ್-400 ಟ್ರಿಯುಂಫ್ ಕ್ಷಿಪಣಿ ಸಾಧನದ ಖರೀದಿ ಸೇರಿದಂತೆ 20 ಮಹತ್ವದ ಅಂಶಗಳಿಗೆ ಉಭಯ ದೇಶಗಳು ಸಹಿ ಹಾಕಿವೆ.
ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸದಂತೆ ಅಮೆರಿಕದ ಎಚ್ಚರಿಕೆ ನಡುವೆಯೇ ಭಾರತವು ಈ ಒಪ್ಪಂದಕ್ಕೆ ಮಾಡಿಕೊಂಡಿದೆ. ಎಸ್-400 ಟ್ರಿಯುಂಫ್, ಭಾರತ-ಚೀನಾ ನಡುವಿನ 4,000 ಕಿ.ಮೀ. ಗಡಿಯಲ್ಲಿ ಭಾರತದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲಿದೆ.
ರಷ್ಯಾ, ಉತ್ತರ ಕೊರಿಯಾ ಅಥವಾ ಇರಾನ್ ಜತೆ ಮಹತ್ವದ ಒಪ್ಪಂದ ವ್ಯವಹಾರಗಳನ್ನು ನಡೆಸುವ ದೇಶಗಳ ಮೇಲೆ ಅಮೆರಿಕ ತನ್ನ 'ಕಾಟ್ಸಾ' ಕಾಯ್ದೆಯಡಿ ನಿರ್ಬಂಧ ಹೇರುವ ಸಾಧ್ಯತೆ ಇದೆ. ಹೀಗಾಗಿ, ಈ ಒಪ್ಪಂದವನ್ನು ಭಾರತ ಯಾವ ರೀತಿ ನಿಭಾಯಿಸಲಿದೆ ಎಂದು ಕುತೂಹಲಕಾರಿಯಾಗಿದೆ.
ರಷ್ಯಾದಿಂದ ನಾಲ್ಕು ಕ್ರಿವಾಕ್ ಯುದ್ಧ ನೌಕೆಗಳ ಖರೀದಿಗೂ ಭಾರತ ಚಿಂತನೆ ನಡೆಸಿದೆ. ಇದು 2.5 ಶತಕೋಟಿ ಡಾಲರ್ ಒಪ್ಪಂದವಾಗಿದ್ದು, ಎರಡು ನೌಕೆಗಳನ್ನು ಭಾರತದಲ್ಲಿಯೇ ನಿರ್ಮಿಸಲಾಗುತ್ತದೆ.
ಇರಾನ್‌ನಿಂದ ಕಚ್ಚಾ ತೈಲ ಆಮದಿನ ಮೇಲೆ ಅಮೆರಿಕದ ನಿರ್ಬಂಧ ಸೇರಿದಂತೆ ವಿವಿಧ ಪ್ರಾದೇಶಿಕ ಹಾಗೂ ಜಾಗತಿಕ ವಿಚಾರಗಳ ಕುರಿತೂ ಉಭಯ ದೇಶಗಳ ಮುಖಂಡರು ಚರ್ಚಿಸಿದ್ದಾರೆ.

ಕ್ಷಿಪಣಿ ವ್ಯವಸ್ಥೆ ಮಾರಾಟಕ್ಕೆ ಒಪ್ಪಿಗೆ
ಭಾರತಕ್ಕೆ ಎಸ್-400 ಟ್ರಿಯುಂಫ್ ಕ್ಷಿಪಣಿ ವ್ಯವಸ್ಥೆ ಮಾರಾಟ ಮಾಡುವ ಒಪ್ಪಂದಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಿ ಹಾಕಿದರು. ಈ ಒಪ್ಪಂದವು ಭಾರತದ ವಾಯು ಪಡೆಯ ಸಾಮರ್ಥ್ಯದ ವೃದ್ಧಿಗೆ ನೆರವಾಗಲಿದೆ. ದ್ವಿಪಕ್ಷೀಯ ಒಪ್ಪಂದದ ಬಗ್ಗೆ ಮಧ್ಯಾಹ್ನ ಅಧಿಕಾರಿಗಳು ಖಚಿತಪಡಿಸಿದರು.

ಬಾಹ್ಯಾಕಾಶ ಒಪ್ಪಂದ
ಬಾಹ್ಯಾಕಾಶ ಸಹಕಾರ ಒಪ್ಪಂದಕ್ಕೆ ರಷ್ಯಾ ಮತ್ತು ಭಾರತಗಳು ಸಹಿ ಹಾಕಿವೆ. ರಷ್ಯಾದ ಸಿಬೆರಿಯಲ್ಲಿರುವ ನೊವೊಸಿಬಿರಿಸ್ಕ್ ನಗರದ ಸಮೀಪ ಭಾರತದ ಬಾಹ್ಯಾಕಾಶ ನಿರ್ವಹಣಾ ಕೇಂದ್ರ ಸ್ಥಾಪಿಸಲು ನೆರವು ನೀಡುವುದಾಗಿ ರಷ್ಯಾ ಒಪ್ಪಿಕೊಂಡಿದೆ.

ಶಸ್ತ್ರಾಸ್ತ್ರ ಒಪ್ಪಂದ
ಭಾರತದೊಂದಿಗೆ ನೂರಾರು ಕೋಟಿ ಡಾಲರ್ ವೆಚ್ಚದ ಶಸ್ತ್ರಾಸ್ತ್ರ ಒಪ್ಪಂದವನ್ನು ರಷ್ಯಾ ಮಾಡಿಕೊಳ್ಳಲಿದೆ. ಚೀನಾದೊಂದಿಗಿನ ಗಡಿ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪರಸ್ಪರ ಶತ್ರು ದೇಶಗಳಾದ ರಷ್ಯಾ ಮತ್ತು ಅಮೆರಿಕ ಎರಡರ ಜತೆಯೂ ರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಒಪ್ಪಂದಗಳನ್ನು ತುರ್ತಾಗಿ ಮಾಡಿಕೊಳ್ಳುವುದು ಭಾರತಕ್ಕೆ ಅನಿವಾರ್ಯವಾಗಿದೆ.
| Array |
ರಷ್ಯಾ ನಿಯೋಗ
ರಷ್ಯಾ ಅಧ್ಯಕ್ಷರೊಂದಿಗೆ ಉನ್ನತ ಮಟ್ಟದ ನಿಯೋಗವೂ ಭಾರತಕ್ಕೆ ಭೇಟಿ ನೀಡಿದೆ. ಉಪ ಪ್ರಧಾನಿ ಯೂರಿ ಬೊರಿಸೊವ್, ವಿದೇಶಾಂಗ ಸಚಿವ ಸೆರ್ಜಿ ಲೊವ್ರೊವ್, ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಡೆನಿಸ್ ಮಾಂಟುರೊವ್ ಈ ನಿಯೋಗದಲ್ಲಿದ್ದಾರೆ.
ಭಾರತ ಮತ್ತು ರಷ್ಯಾ ನಡುವಿನ ಸಂಬಂಧವನ್ನು ಇನ್ನಷ್ಟು ಪ್ರೀತಿಪೂರ್ವಕ ಮತ್ತು ಚೆಂದಗೊಳಿಸಲು ಈ ಮಾತುಕತೆ ನೆರವಾಗಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications