ಅಬ್ಬಾ, 'ಪ್ರಧಾನ ಸೇವಕ'ನ ಪಕ್ಷಕ್ಕೆ ಬಂದ ದೇಣಿಗೆ ಇಷ್ಟೊಂದಾ?
ನವದೆಹಲಿ, ಮೇ 31: 2020-21ನೇ ಹಣಕಾಸು ವರ್ಷದಲ್ಲಿ ದೇಶದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಅತಿ ಹೆಚ್ಚಿನ ದೇಣಿಗೆ ಹರಿದು ಬಂದಿದೆ. ಕೇಂದ್ರ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಿಗೆ ಬಂದಿರುವ ದೇಣಿಗೆ ವಿವರನ್ನು ಬಹಿರಂಗಪಡಿಸಲಾಗಿದೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ವಿವಿಧ ಸಂಸ್ಥೆಗಳು, ಟ್ರಸ್ಟ್‌ಗಳು, ವ್ಯಕ್ತಿಗಳು ಉದಾರವಾಗಿ ದೇಣಿಗೆ ನೀಡಿದ್ದಾರೆ. ಒಂದು ವರ್ಷದಲ್ಲಿ ಬಿಜೆಪಿಗೆ ಬಂದಿರುವ ದೇಣಿಗೆ ಮೊತ್ತ 4,77,54,50,077 ರೂಪಾಯಿ.
ಇನ್ನು ದೇಶದ ಮತ್ತೊಂದು ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್‌ಗೆ ವಿವಿಧ ಸಂಸ್ಥೆಗಳು, ವ್ಯಕ್ತಿಗಳಿಂದ ಒಟ್ಟು 74,50,49,731 ರೂ. ದೇಣಿಗೆ ಹರಿದುಬಂದಿದೆ. ಬಿಜೆಪಿ ಪಡೆದ ದೇಣಿಗೆಗೆ ಹೋಲಿಸಿದರೆ ಶೇಕಡಾ 15ರಷ್ಟು ದೇಣಿಗೆ ಮಾತ್ರ ಕಾಂಗ್ರೆಸ್‌ಗೆ ಬಂದಿದೆ.

ಚುನಾವಣಾ ಕಾಯ್ದೆ ಪ್ರಕಾರ 20 ಸಾವಿರ ರೂ. ಮೀರಿ ದೇಣಿಗೆ ಪಡೆದಲ್ಲಿ ಆ ಕುರಿತು ರಾಜಕೀಯ ಪಕ್ಷಗಳು ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಬಿಜೆಪಿಯು ಮಾ.14ರಂದು ಚುನಾವಣಾ ಸಮಿತಿಗೆ 2020-21ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದ ದೇಣಿಗೆ ಸ್ವೀಕೃತಿ ವರದಿ ಸಲ್ಲಿಸಿದೆ.
ಶ್ರೀಮಂತ ರಾಜಕೀಯ ಪಕ್ಷ ಬಿಜೆಪಿ; 2019-20ರ ಹಣಕಾಸು ವರ್ಷದಲ್ಲಿ ಭಾರತದ ವಿವಿಧ ರಾಜಕೀಯ ಪಕ್ಷಗಳ ಆಸ್ತಿ ಮತ್ತು ಸಾಲದ ವಿವರಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಹಿರಂಗಪಡಿಸಿತ್ತು. ಬಿಜೆಪಿ 4,847.78 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿತ್ತು. ಇದು ಭಾರತ ದೇಶದಲ್ಲೇ ರಾಜಕೀಯ ಪಕ್ಷವೊಂದು ಹೊಂದಿರುವ ಅತ್ಯಧಿಕ ಮೌಲ್ಯದ ಆಸ್ತಿಯಾಗಿದೆ.
ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶದ ಪ್ರಮುಖ ಪಕ್ಷ ಬಿಎಸ್‌ಪಿ ಇತ್ತು, ಇದು 698.33 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿತ್ತು. ನಂತರದ ಸ್ಥಾನದಲ್ಲಿರುವ ಕಾಂಗ್ರೆಸ್ 588.16 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿತ್ತು.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನೀಡಿರುವ ವರದಿ ಪ್ರಕಾರ, 2019-20ನೇ ಸಾಲಿನಲ್ಲಿ 7 ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಆಸ್ತಿಯ ಮೌಲ್ಯವು 6,988.57 ಕೋಟಿ ರೂಪಾಯಿ ಮತ್ತು 44 ಪ್ರಾದೇಶಿಕ ಪಕ್ಷಗಳ ಆಸ್ತಿ ಮೌಲ್ಯ 2,129.38 ಕೋಟಿ ರೂಪಾಯಿ.
4,847.78 ಕೋಟಿ ಆಸ್ತಿಯೊಂದಿಗೆ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಒಟ್ಟು ರಾಜಕೀಯ ಪಕ್ಷಗಳ ಆಸ್ತಿಯಲ್ಲಿ ಶೇಕಡಾ 69.37 ಬಿಜೆಪಿ ಪಾಲಿದೆ.












Click it and Unblock the Notifications