ಈಶಾನ್ಯ ದೆಹಲಿ ಗಲಭೆ; ಕೊಲೆ ಆರೋಪಿ ಬಂಧಿಸಿದ ಎಸ್‌ಐಟಿ
ನವದೆಹಲಿ, ಮಾರ್ಚ್ 08 : ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂದರ್ಭದಲ್ಲಿ ಕೊಲೆ ಮಾಡಿದ ಆರೋಪದ ಮೇಲೆ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 47 ಜನರು ಮೃತಪಟ್ಟಿದ್ದರು.
ಬಂಧಿತ ಆರೋಪಿಯನ್ನು 27 ವರ್ಷದ ಶಿವ ವಿಹಾರ್ ಎಂದು ಗುರುತಿಸಲಾಗಿದೆ. ಫೆಬ್ರವರಿ 24ರಂದು ಸ್ವೀಟ್ ಅಂಗಡಿ ಮಾಲೀಕ ದಿಲ್‌ಬುರ್ ಸಿಂಗ್ ಎಂಬಾತನನ್ನು ಶಿವ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ದೆಹಲಿ ಗಲಭೆಯ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ.
ದೆಹಲಿಯಲ್ಲಿ ಗಲಭೆ ನಡೆದ ಸಂದರ್ಭದಲ್ಲಿ ಹಲವರು ಶಿವ ವಿಹಾರ್ ಗುರುತು ಹಿಡಿದಿದ್ದರು. ಶಿವ ಕೇವಲ ಕೊಲೆ ಮಾಡಿಲ್ಲ, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ, ಅಂಗಡಿಗಳಿಗೆ ಬೆಂಕಿಯನ್ನು ಹಚ್ಚಿದ್ದ ಎಂದು ಆರೋಪಿಸಲಾಗಿದೆ.

ಸ್ವೀಟ್ ಅಂಗಡಿಯಲ್ಲಿ ಫೆಬ್ರವರಿ 26ರಂದು ದಿಲ್‌ಬುರ್ ಸಿಂಗ್ ಶವ ಪತ್ತೆಯಾಗಿತ್ತು. ಸಿಂಗ್ ಕೊಲೆ ಮಾಡಿದ್ದಲ್ಲದೆ ಆತನ ಎರಡೂ ಕೈಗಳನ್ನು ಕತ್ತರಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಆಧರಿಸಿ ಶಿವ ವಿಹಾರ್ ಬಂಧಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಪರ, ವಿರೋಧ ಹೋರಾಟಗಾರರ ನಡುವೆ ಈಶಾನ್ಯ ದೆಹಲಿಯಲ್ಲಿ ಘರ್ಷಣೆ ಆರಂಭವಾಗಿತ್ತು. ಬಳಿಕ ಇದು ಕೋಮು ಗಲಭೆಯ ಸ್ವರೂಪ ಪಡೆದಿತ್ತು. ಗಲಭೆಯಲ್ಲಿ ಇದುವರೆಗೂ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ದೆಹಲಿ ಸರ್ಕಾರ ಗಲಭೆಯ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ನೇಮಕ ಮಾಡಿದೆ. ಗಲಭೆಯಲ್ಲಿ 300 ಜನರು ಗಾಯಗೊಂಡಿದ್ದಾರೆ. ಇದುವರೆಗೂ 690 ಎಫ್‌ಐಆರ್ ದಾಖಲು ಮಾಡಲಾಗಿದೆ. 2193 ಜನರನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications