"ಪ್ರತಿಭಟಿಸಲು ಹಕ್ಕಿದೆ; ಆದರೆ ಎಲ್ಲಾ ಸಮಯ, ಎಲ್ಲಾ ಕಡೆಯಲ್ಲಲ್ಲ"
ನವದೆಹಲಿ, ಫೆಬ್ರುವರಿ 13: "ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ ಎಲ್ಲಾ ಸಮಯ, ಎಲ್ಲಾ ಕಡೆಯಲ್ಲೂ ಅಲ್ಲ" ಎಂದಿರುವ ಸುಪ್ರೀಂ ಕೋರ್ಟ್, 12 ಕಾರ್ಯಕರ್ತರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೆಹಲಿ ಶಾಹೀನ್ ಬಾಗ್ ನಲ್ಲಿ ನಡೆದಿದ್ದ ಪ್ರತಿಭಟನೆ ಕುರಿತು ಅಕ್ಟೋಬರ್ 2020ರ ತೀರ್ಪಿನ ಮರುಪರಿಶೀಲನಾ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, ಶನಿವಾರ ಈ ಮನವಿಯನ್ನು ತಿರಸ್ಕರಿಸಿದೆ.
ಸಂಜಯ್ ಕಿಶಾನ್ ಕೌಲ್, ಅನಿರುದ್ಧ ಬೋಸ್ ಹಾಗೂ ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಫೆಬ್ರುವರಿ 9ರಂದು 12 ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಯ ಮರುಪರಿಶೀಲನೆಗೆ ಆದೇಶಿಸಿತ್ತು.

"ಈ ಅರ್ಜಿಯನ್ನು ಮರುಪರಿಶೀಲಿಸಲಾಗಿದೆ. ಮೇಲ್ಮನವಿಯಲ್ಲಿನ ಅಂಶಗಳನ್ನು ಪರಿಗಣಿಸಲಾಗಿದೆ. ಅಕ್ಟೋಬರ್ 2020ರಲ್ಲಿ ನೀಡಿದ ಆದೇಶದಲ್ಲಿ ಯಾವುದೇ ಬದಲಾವಣೆ ಮಾಡುವ ಲೋಪವಿಲ್ಲ" ಎಂದು ತಿಳಿಸಿದೆ. ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭ, ದೀರ್ಘಕಾಲ ಸಾರ್ವಜನಿಕ ರಸ್ತೆಗಳಲ್ಲಿ ಪ್ರತಿಭಟನೆ ಕೈಗೊಂಡು ಸಂಚಾರಕ್ಕೆ ತಡೆ ಒಡ್ಡಿದ್ದನ್ನು ನ್ಯಾಯಾಲಯ ಆಕ್ಷೇಪಿಸಿತ್ತು.
ಈ ಅರ್ಜಿಯನ್ನು ಶನಿವಾರ ಮರುಪರಿಶೀಲನೆ ನಡೆಸಿದ್ದು, "ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಆದದರೆ ಎಲ್ಲಾ ಸಮಯದಲ್ಲಿಯೂ ಎಲ್ಲಾ ಕಡೆಯಲ್ಲಿಯೂ ಅಲ್ಲ. ಕೆಲವೊಮ್ಮೆ ದಿಢೀರ್ ಪ್ರತಿಭಟನೆಗಳು ಆಗುತ್ತವೆ. ಆದರೆ ಸುದೀರ್ಘ ಪ್ರತಿಭಟನೆಗಳ ವಿಷಯವೇ ಬೇರೆ. ಸಾರ್ವಜನಿಕ ಜಾಗದಲ್ಲಿ ದೀರ್ಘಕಾಲ ಪ್ರತಿಭಟನೆ ನಡೆಸುತ್ತಾ ಮತ್ತೊಬ್ಬರ ಹಕ್ಕಿಗೆ ಚ್ಯುತಿ ತರುವುದು ಸಮವಲ್ಲ" ಎಂದು ಆದೇಶದಲ್ಲಿ ತಿಳಿಸಿದೆ.












Click it and Unblock the Notifications