ದೀದಿ ವಿರುದ್ಧ ರಾಹುಲ್ ಹಳೇ ಟ್ವೀಟ್ ನೆನಪಿಸಿದ ರವಿಶಂಕರ್ ಪ್ರಸಾದ್
ನವದೆಹಲಿ, ಫೆಬ್ರವರಿ 04: ಪಶ್ಚಿಮ ಬಂಗಾಳದಲ್ಲಿ ಸಿಬಿಐ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ವಿವಾದ ತಾರಕಕ್ಕೇರಿದೆ. ಸದ್ಯಕ್ಕೆ ದೀದಿ ಬೆಂಬಲಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ಘಟಾನುಘಟಿ ನಾಯಕರೂ ನಿಂತಿದ್ದಾರೆ.
ಆದರೆ 2014 ರಲ್ಲಿ ನಾವು ಅಧಿಕಾರಕ್ಕೆ ಬರುವ ಮೊದಲೇ ರಾಹುಲ್ ಗಾಂಧಿ ಅವರು ಶಾರದಾ ಚಿಟ್ ಫಂಡ್ ಹಗರಣದ ವಿರುದ್ಧ ಖಾರವಾಗಿ ಮಾಡಿದ್ದ ಟ್ವೀಟ್ ಅನ್ನು ಬಿಜೆಪಿ ಮುಖಂಡ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ನೆನಪಿಸಿಕೊಂಡಿದ್ದಾರೆ.
"2014ರಲ್ಲಿ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಪಶ್ಚಿಮ ಬಂಗಾಳದ ಚಿಟ್ ಫಂಡ್ ಹಗರಣದಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ತಮ್ಮ ಹಣ ಕಳೆದುಕೊಂಡಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಅದೇ ವರ್ಷ ಮೇ 26 ರಿಂದ. ನಾವು ಅಧಿಕಾರಕ್ಕೆ ಬರುವ ಮೊದಲೇ ಈ ಹಗರಣ ಆಗಿತ್ತು" ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

"ಬಂಗಾಳದಲ್ಲಿ ಏನಾಗುತ್ತಿದೆ? ಒಬ್ಬ ಪೊಲೀಸ್ ಅಧಿಕಾರಿಯೇ ರಾಜಕಾರಣಿಗಳ ಜೊತೆ ಧರಣಿಗೆ ಕೂರುವುದು ಎಂದರೇನು? ಇದರ ಅರ್ಥವೇನು? ಧರಣಿ ಕೂರುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಅರವಿಂದ್ ಕೇಜ್ರಿವಾಲ್ ಅವರ ಹಾದಿಯನ್ನೇ ತುಳಿಯುತ್ತಿದ್ದಾರೆ" ಎಂದು ಅವರು ಕಿಡಿಕಾರಿದರು.
ಬಹುಕೋಟಿ ಶಾರದಾ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಬಂಧಿಸಲು ಸಿಬಿಐ ಮುಂದಾಗಿತ್ತು. ಆದರೆ ಸಿಬಿಐ ಅಧಿಕಾರಿಗಳನ್ನೇ ಬಂಗಾಳದ ಪೊಲೀಸರು ವಶಕ್ಕೆ ಪಡೆದಿದ್ದರು.
ತನಿಖೆಗೆ ಬಂದ ಸಿಬಿಐ ಕ್ರಮವನ್ನು ಖಂಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಸಂವಿಧಾನ ಉಳಿಸಿ' ಎಂದು ಕೋಲ್ಕತ್ತದ ಮೆಟ್ರೋ ಚಾನೆಲ್ ಬಳಿ ಧರಣಿ ಆರಂಭಿಸಿದ್ದಾರೆ.












Click it and Unblock the Notifications