ರಫೇಲ್ ಒಪ್ಪಂದದ ವಿವಾದದ ನಡುವೆಯೇ ಇಬ್ಬರು ಹಿರಿಯ ಅಧಿಕಾರಿಗಳ ವರ್ಗ
ನವದೆಹಲಿ, ಡಿಸೆಂಬರ್ 25: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ವಿವಾದ ಭುಗಿಲೆದ್ದಿರುವ ಸಂದರ್ಭದಲ್ಲಿಯೇ ರಕ್ಷಣಾ ಸಚಿವಾಲಯದ ಹಣಕಾಸು ವಿಭಾಗವನ್ನು ನಿರ್ವಹಿಸುತ್ತಿದ್ದ ಇಬ್ಬರು ಹಿರಿಯ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.
ಸರ್ಕಾರ ಈ ವಿಭಾಗಕ್ಕೆ ಅವರನ್ನು ಕೆಲವು ತಿಂಗಳ ಹಿಂದಷ್ಟೇ ನಿಯೋಜಿಸಿತ್ತು. ಆರ್ಥಿಕ ಸಲಹೆಗಾರ (ರಕ್ಷಣಾ ಸೇವೆ) ಅಥವಾ ಎಫ್‌ಎಡಿಎಸ್ ವಿಭಾಗದ ಅತಿ ಹಿರಿಯ ಅಧಿಕಾರಿಯ ಸ್ಥಾನಕ್ಕೆ ಹಣಕಾಸು ಮತ್ತು ಲೆಕ್ಕಪತ್ರ ಸೇವೆಗಳ ಅಧಿಕಾರಿಯೊಬ್ಬರನ್ನು ನೇಮಿಸಿರುವುದು ಭಾರತೀಯ ರಕ್ಷಣಾ ಲೆಕ್ಕಪತ್ರ ಸೇವೆ (ಐಡಿಎಎಸ್) ಕೇಂದ್ರಕ್ಕೆ ಆಘಾತ ನೀಡಿದೆ.
ಆಗಸ್ಟ್‌ನಲ್ಲಿ ಎಫ್‌ಎಡಿಎಸ್ ಅಧಿಕಾರ ಸ್ವೀಕರಿಸಿದ್ದ ಮಧುಲಿಕಾ ಸುಕುಲ್ ಅವರನ್ನು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಕಾರ್ಯದರ್ಶಿಯನ್ನಾಗಿ ವರ್ಗಾಯಿಸಲಾಗಿದೆ. ಅವರ ಪತಿ ಪ್ರಶಾಂತ್ ಅವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ (ಎನ್‌ಸಿಎಂ) ನೇಮಿಸಲಾಗಿದೆ.

ಈ ಇಬ್ಬರೂ ಐಡಿಎಎಸ್‌ನ ಅತ್ಯಂತ ಹಿರಿಯ ಅಧಿಕಾರಿಗಳಾಗಿದ್ದು, ವಿವಿಧ ಸಚಿವಾಲಯಗಳಲ್ಲಿ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
1984ನೇ ಬ್ಯಾಚ್‌ನ ಭಾರತೀಯ ಲೆಕ್ಕಾಚಾರ ಮತ್ತು ಲೆಕ್ಕಪತ್ರ ಸೇವೆಗಳ ಅಧಿಕಾರಿ ಗಾರ್ಗಿ ಕೌಲ್ ಅವರನ್ನು ಅವರು ಇನ್ನು ಮುಂದೆ ರಕ್ಷಣಾ ಸಚಿವಾಲಯದ ಹಣಕಾಸು ವಿಭಾಗದ ಮುಖ್ಯಸ್ಥರಾಗಿರಲಿದ್ದಾರೆ.
ರಫೇಲ್ ಒಪ್ಪಂದದಲ್ಲಿ ವಿಮಾನಗಳಿಗೆ ತಗುಲುವ ವೆಚ್ಚವು ಭಾರಿ ವಿವಾದ ಸೃಷ್ಟಿಸಿದೆ. ಹೀಗಿರುವಾಗ ಇಬ್ಬರು ಹಿರಿಯ ಅಧಿಕಾರಿಗಳನ್ನು ಬೇರೆ ಇಲಾಖೆಗಳಿಗೆ ಎತ್ತಂಗಡಿ ಮಾಡಿರುವುದು ರಕ್ಷಣಾ ಇಲಾಖೆ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications