ಚುನಾವಣೆ ಆಯೋಗದ ಶಿಫಾರಸಿನ ಮೇಲೆ ವೆಲ್ಲೂರು ಕ್ಷೇತ್ರದ ಚುನಾವಣೆ ರದ್ದು
ನವದೆಹಲಿ, ಏಪ್ರಿಲ್ 16: ಮತದಾರರ ಮೇಲೆ ಪ್ರಭಾವ ಬೀರುವ ಸಲುವಾಗಿ ಹಣದ ದುರ್ಬಳಕೆ ಬಗ್ಗೆ ವಿಸ್ತೃತವಾದ ವರದಿ ಬಂದ ಮೇಲೆ, ಚುನಾವಣೆ ಆಯೋಗದ ಶಿಫಾರಸಿನ ಅನ್ವಯ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮಂಗಳವಾರ ರದ್ದುಪಡಿಸಿದ್ದಾರೆ.
ಏಪ್ರಿಲ್ ಹದಿನಾಲ್ಕನೇ ತಾರೀಕು ಚುನಾವಣೆ ಆಯೋಗದ ಶಿಫಾರಸು ಸ್ವೀಕರಿಸಿ, ಗೌರವಾನ್ವಿತ ರಾಷ್ಟ್ರಪತಿಗಳು ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಿದ್ದಾರೆ ಎಂದು ಚುನಾವಣೆ ಆಯೋಗದ ವಕ್ತಾರ ಶೆಫಾಲಿ ಶರಣ್ ತಿಳಿಸಿದ್ದಾರೆ. ವೆಲ್ಲೂರು ಕ್ಷೇತ್ರದಲ್ಲಿನ ವಾಸ್ತವ ವರದಿಯನ್ನು ಪಡೆದು, ಚುನಾವಣೆ ಸಮಿತಿಯು ಶೀಘ್ರದಲ್ಲೇ ಹೊಸ ದಿನಾಂಕವನ್ನು ನಿಗದಿ ಮಾಡಲಿದೆ.
ವಿವಿಧ ಸಂಸ್ಥೆಗಳು ನೀಡಿದ ವರದಿ ಅನ್ವಯ ಚುನಾವಣೆ ಆಯೋಗವು ವೆಲ್ಲೂರು ಕ್ಷೇತ್ರದಲ್ಲಿ ಚುನಾವಣೆ ರದ್ದುಗೊಳಿಸುವಂತೆ ಮನವಿ ಮಾಡಿತ್ತು. ಈ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯುವ ಸಲುವಾಗಿ ಹಣದ ದುರ್ಬಳಕೆ ಆಗುತ್ತಿದೆ ಎಂದು ವರದಿ ಆಗಿತ್ತು. ಜತೆಗೆ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗೆ ಸೇರಿದ ದೊಡ್ಡ ಮೊತ್ತದ ನಗದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಮಾಡಿತ್ತು.

ಆದಾಯ ತೆರಿಗೆ ಇಲಾಖೆಯು ಪತ್ತೆ ಹಚ್ಚಿದ ಅಂಶಗಳ ಆಧಾರದಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದರು.












Click it and Unblock the Notifications