ಅತ್ಯಾಚಾರ ಪ್ರಕರಣ : ದೇವಮಾನವ ಡಾಟಿ ಮಹಾರಾಜ್ ವಿರುದ್ಧ ಚಾರ್ಜ್ ಶೀಟ್
ನವದೆಹಲಿ, ಅಕ್ಟೋಬರ್ 01: ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಡಾಟಿ ಮಹಾರಾಜ್ ವಿರುದ್ಧ ದೆಹಲಿ ಪೊಲೀಸರು, ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ದೆಹಲಿ ಪೊಲೀಸರು, ಸಾಕೇತ್ ಕೋರ್ಟಿನಲ್ಲಿ ಇಂದು ಬಾಬಾ ಡಾಟಿ ಮಹಾರಾಜ್ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದರು.
ತಮ್ಮ ಆಶ್ರಮದಲ್ಲಿದ್ದ ಯುವತಿ ಮೇಲೆ ಡಾಟಿ ಮಹಾರಾಜ್ ಹಾಗೂ ಆತನ ಸಹಚರರು ಅತ್ಯಾಚರ ಎಸಗಿದ ಆರೋಪವಿದೆ. ಫತೇಪುರ್ ಬೆರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಾಟಿ ಮಹಾರಾಜ್ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 376, 377, 354 ಮತ್ತು 34ರ ಅಡಿಯಲ್ಲಿ ಕೇಸ್ ಹಾಕಲಾಗಿದೆ.
ಡಾಟಿ ಮಹಾರಾಜ್ ಅವರು ಎರಡು ವರ್ಷಗಳ ಹಿಂದೆ ತಮ್ಮ ಶನಿಧಾಮ್ ಆಶ್ರಮದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಭಯದಿಂದ ನಾನು ದೂರು ನೀಡಲು ಹಿಂಜರಿದಿದ್ದೆ ಎಂದು ದೂರು ನೀಡಿರುವ ಮಹಿಳೆ ಹೇಳಿದ್ದಾರೆ.

ಜೂನ್ 07ರಂದು ದೂರು ದಾಖಲಾಗಿದ್ದು, ಜೂನ್ 11ರಂದು ಎಫ್ಐಆರ್ ಹಾಕಲಾಗಿತ್ತು. ಜೂನ್ 22ರಂದು ಡಾಟಿ ಮಹಾರಾಜ್ ಅವರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು. ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದರೂ ಇದು ನನ್ನ ವಿರುದ್ಧ ನಡೆದಿರುವ ಸಂಚು ಎಂದೇ ಮಹಾರಾಜ್ ಅವರು ಪ್ರತಿಪಾದಿಸಿದ್ದರು.
ದೆಹಲಿ ಹಾಗೂ ಎನ್ ಸಿಆರ್ ಭಾಗದಲ್ಲಿ ಜನಪ್ರಿಯತೆ ಗಳಿಸಿರುವ ಡಾಟಿ ಮಹಾರಾಜ್ ಅವರು ಗುರುವಾರ ಹಾಗೂ ಶನಿವಾರದಂದು ನಡೆಸುವ ಸತ್ಸಂಗ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಹಲವು ಟಿವಿ ಶೋಗಳು, ವೆಬ್ ಸೈಟ್, ಸಾಮಾಜಿಕ ಜಾಲ ತಾಣಗಳಲ್ಲಿ ಪ್ರವಚನ ನೀಡುತ್ತಾ ಬಂದಿದ್ದಾರೆ.












Click it and Unblock the Notifications