ದೆಹಲಿಯಲ್ಲಿ ಭೀಕರ ಚಿತ್ರಣ; ಸ್ಟ್ರೆಚರ್‌ಗಳ ಮೇಲೇ ಪ್ರಾಣ ಬಿಡುತ್ತಿರುವ ರೋಗಿಗಳು
ನವದೆಹಲಿ, ಏಪ್ರಿಲ್ 24: ದೇಶದಲ್ಲಿ ಕೊರೊನಾ ಎರಡನೇ ಅಲೆ ತನ್ನ ಅಬ್ಬರ ಮುಂದುವರೆಸಿದ್ದು, ರಾಜಧಾನಿ ದೆಹಲಿಯಲ್ಲಿ ಕೊರೊನಾ ರೋಗಿಗಳಿಗೆ ಆಮ್ಲಜನಕ, ಆಸ್ಪತ್ರೆ ಸಿಗದೇ ಪರದಾಡುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಆಸ್ಪತ್ರೆ ಮುಂದೆಯೇ ಜನರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯಗಳೂ ಕಂಡುಬರುತ್ತಿವೆ.
ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 25ಕ್ಕೂ ಹೆಚ್ಚು ಮಂದಿ ಶನಿವಾರ ಮೃತಪಟ್ಟಿದ್ದಾರೆ. ಈ ದುರಂತ ಕಣ್ಣ ಮುಂದಿರುವಾಗಲೇ ಆಸ್ಪತ್ರೆ ಮುಂದೆ ರೋಗಿಗಳು ಸಾವನ್ನಪ್ಪುತ್ತಿರುವ ಸಂಗತಿಗಳು ಭೀಕರ ವಾತಾವರಣ ಸೃಷ್ಟಿಸಿವೆ. ಮುಂದೆ ಓದಿ...(ಸಾಂಕೇತಿಕ ಚಿತ್ರಗಳು)

ಸ್ಟ್ರೆಚರ್‌ಗಳ ಮೇಲೇ ಸಾಯುತ್ತಿದ್ದಾರೆ ರೋಗಿಗಳು
ಕೊರೊನಾ ಸೋಂಕಿನ ಹೆಚ್ಚಳದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯೂ ಸಹಜವಾಗಿ ಏರಿಕೆಯಾಗಿದೆ. ಜೊತೆಗೆ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲದೇ, ಬೆಡ್ ಸಿಗಲು ಕಾಯುತ್ತಾ ನಿಲ್ಲಬೇಕಾಗಿದೆ. ಕಾಯುವಾಗಲೇ ಆಸ್ಪತ್ರೆ ಮುಂದೆ ಸ್ಟ್ರೆಚರ್‌ಗಳ ಮೇಲೆ ರೋಗಿಗಳು ಸಾವನ್ನಪ್ಪುತ್ತಿರುವ ಸಂಗತಿಯೂ ನಡೆದಿದೆ. ಶ್ಯಾಮ ನಾರಾಯಣ್ ಎಂಬುವರು ಕೊರೊನಾಗೆ ಸೂಕ್ತ ಚಿಕಿತ್ಸೆ ಸಿಗದೇ ಆಸ್ಪತ್ರೆಯ ಮುಂದೆ ಸ್ಟ್ರೆಚರ್‌ನಲ್ಲೇ ಪ್ರಾಣ ಬಿಟ್ಟಿರುವುದು ತಿಳಿದುಬಂದಿದೆ. ಇದು ಹಲವು ರೋಗಿಗಳ ಕಥೆಯೂ ಆಗಿದೆ.

"ಆಸ್ಪತ್ರೆಗೆ ದಾಖಲಿಸಿದ್ದರೆ ಬದುಕುತ್ತಿದ್ದರೇನೋ"
"ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ನನ್ನ ಸಹೋದರನನ್ನು ಆಸ್ಪತ್ರೆಗೆ ಕರೆತಂದಿದ್ದೆವು. ಆದರೆ ಮನೆಯಲ್ಲಿಯೇ ಹುಷಾರಾಗಬಹುದು ಎಂದು ವೈದ್ಯರು ಹೇಳಿದ್ದರಿಂದ ಮನೆಗೆ ಕರೆದುಕೊಂಡು ಹೋದೆವು. ಹತ್ತು ಗಂಟೆಗಳ ನಂತರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ಮತ್ತೆ ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಿಲ್ಲ. ಸ್ಟ್ರೆಚರ್ ಮೇಲೆ ಅವರನ್ನು ಮಲಗಿಸಿದ್ದೆವು. ದಾಖಲು ಮಾಡಿಕೊಳ್ಳುವ ಮುನ್ನವೇ ರೋಗಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು" ಎಂದು ಶ್ಯಾಮ್ ನಾರಾಯಣ್ ಅವರ ಸಹೋದರ ಪರಿಸ್ಥಿತಿಯ ಭೀಕರತೆ ತೆರೆದಿಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ್ದರೆ ಅವರು ಬದುಕುತ್ತಿದ್ದರೇನೋ ಎಂದು ಸಂಕಟ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗಳ ಮೇಲೆ ಹೆಚ್ಚಿರುವ ಹೊರೆ
ದೆಹಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆಯು ಆಮ್ಲಜನಕ ಹಾಗೂ ಹಾಸಿಗೆ ಕೊರತೆ ಎದುರಿಸುತ್ತಿರುವ ನಗರದ ಆಸ್ಪತ್ರೆಗಳಲ್ಲಿ ಒಂದಾಗಿದೆ. ಅಲ್ಲೂ ಸ್ಟ್ರೆಚರ್‌ಗಳ ಮೇಲೆಯೇ ರೋಗಿಗಳು ಸಾಯುತ್ತಿದ್ದಾರೆ. ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಏರಿಕೆಯಿಂದಾಗಿ ಆಸ್ಪತ್ರೆಗಳ ಮೇಲೆ ಹೊರೆ ಹೆಚ್ಚಾಗಿದೆ ಎಂದು ದೆಹಲಿ ಸರ್ಕಾರ ವಕ್ತಾರರು ತಿಳಿಸಿದ್ದಾರೆ.
ಜೆಟಿಬಿ ಆಸ್ಪತ್ರೆಯಲ್ಲಿ ಹಾಸಿಗೆಗಳು ಲಭ್ಯವಿಲ್ಲದಿದ್ದರೂ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದಾಗ್ಯೂ ಎಲ್ಲಾ ರೋಗಿಗಳಿಗೆ ಬೇರೆ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
Recommended Video

ಮಿತಿ ಮೀರುತ್ತಿರುವ ಪ್ರಕರಣ
ಭಾರತದಲ್ಲಿ ಸತತ ಮೂರನೇ ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,46,786 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 1,66,10,481 ಕೊರೊನಾ ಸೋಂಕಿತರಿದ್ದಾರೆ, ಕಳೆದ 24 ಗಂಟೆಯಲ್ಲಿ 2624 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ 2,19,838 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications