ರೈತರನ್ನು ಉಳಿಸಿ, ದೇಶವನ್ನು ರಕ್ಷಿಸಿ; ಕೃಷಿ ಕಾಯ್ದೆಗಳ ವಿರುದ್ಧ ಕಹಳೆ
ನವದೆಹಲಿ, ಆಗಸ್ಟ್ 6: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ. ದೆಹಲಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ 14 ಪ್ರತಿಪಕ್ಷಗಳ ನೇತತ್ವವನ್ನು ವಹಿಸಿಕೊಂಡು ರೈತರ ಪರ ನಿಂತಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷ ನಾಯಕರು ಕೊವಿಡ್-19 ಶಿಷ್ಟಾಚಾರದ ಹಿನ್ನೆಲೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಸ್ಕ್ ತೊಟ್ಟುಕೊಂಡೇ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ "ರೈತರನ್ನು ಉಳಿಸಿ, ದೇಶವನ್ನು ರಕ್ಷಿಸಿ" ಎಂಬ ನಾಮಫಲಕವನ್ನು ಪ್ರದರ್ಶಿಸಲಾಗುತ್ತಿದೆ.
ಮುಂಗಾರು ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿವಾದಿತ ಕಾಯ್ದೆ ವಿರುದ್ಧ 'ಕಿಸಾನ್ ಸಂಸತ್' ಅಥವಾ 'ರೈತರ ಸಂಸತ್ತು' ಅಡಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಶುಕ್ರವಾರ ರೈತರ ಪರ ಪ್ರತಿಭಟನೆಯಲ್ಲಿ ಭಾಗಿಯಾದ ಪ್ರತಿಪಕ್ಷ ನಾಯಕರು ಕೇಂದ್ರ ಸರ್ಕಾರದ ವಿವಾದಿತ ಕಾಯ್ದೆಗಳ ವಿರುದ್ಧ ಅವಿಶ್ವಾಸ ಮಂಡಿಸಿದರು. ರೈತರ ಹೋರಾಟ, ಕೇಂದ್ರ ಸರ್ಕಾರದ ಹಠದ ಜೊತೆಗೆ ಪ್ರತಿಪಕ್ಷಗಳ ಪ್ರತಿಭಟನೆಯ ವೈಖರಿ ಹೇಗಿತ್ತು ಎಂಬುದನ್ನು ಮುಂದೆ ನೋಡೋಣ.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪ್ರದರ್ಶನ
ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ, ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ, ಶಿವಸೇನೆ, ರಾಷ್ಟ್ರೀಯ ಜನತಾ ದಳ, ಸಮಾಜವಾದಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ(ಸಿಪಿಐ), ಸಿಪಿಐ(ಎಂ), ನ್ಯಾಷನಲ್ ಕಾನ್ಫರೆನ್ಸ್, ಆಮ್ ಆದ್ಮಿ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆರ್ಎಸ್ ಪಿ, ಕೇರಳ ಕಾಂಗ್ರೆಸ್(ಎಂ) ಮತ್ತು ವಿಸಿಕೆ ಪಕ್ಷದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಚಾಲನೆ
ಮುಂಗಾರು ಅಧಿವೇಶನ ಆರಂಭದ ಹೊಸ್ತಿಲಿನಲ್ಲಿ ರೈತರ ಪರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತೇನೆ ಎಂದಿದ್ದ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಚಾಲನೆ ಮಾಡುವುದರ ಮೂಲಕ ವಿಶೇಷ ಗಮನ ಸೆಳೆದಿದ್ದರು. ರೈತರ ಸಂದೇಶವನ್ನು ಸಂಸತ್ತಿನಲ್ಲಿ ಮೊಳಗಿಸುವ ಕೆಲಸವನ್ನು ನಾವು ಮಾಡುತ್ತೇವೆ. ಯಾವುದೇ ರೀತಿ ಚರ್ಚೆಗಳನ್ನು ನಡೆಸದೇ ರೈತರ ಧ್ವನಿಯನ್ನು ಅಡಗಿಸುವ ಹುನ್ನಾರ ನಡೆಸಲಾಗುತ್ತಿದೆ. ವಿವಾದಿತ ಕಪ್ಪು ಕಾಯ್ದೆಗಳನ್ನು ರದ್ದುಗೊಳಿಸುವವವರೆಗೂ ನಮ್ಮ ಹೋರಾಟ ಮುಂದುವರಿಸುವುದಾಗಿ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಕೃಷಿ ಕಾಯ್ದೆಯ ಬಗ್ಗೆ ಕಿಸಾನ್ ಸಂಸತ್ತಿನಲ್ಲಿ ಚರ್ಚೆ
ನವದೆಹಲಿಯಲ್ಲಿ ರೈತರು ನಡೆಸುತ್ತಿರುವ ಕೃಷಿ ಸಂಸತ್ತಿನಲ್ಲಿ ಕಳೆದ ಮೂರು ವಿವಾದಿತ ಕಾಯ್ದೆಗಳ ಪೈಕಿ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ)ಯ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಕೇಂದ್ರ ಸರ್ಕಾರದ ಕಾಯ್ದೆಯು ಅಸಂವಿಧಾನಿಕವಾಗಿದ್ದು, ಖಾಸಗಿಯವರಿಗೆ ಲಾಭದಾಯಕವಾಗಿದೆ. ಇಂಥ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಕಿಸಾನ್ ಸಂಸತ್ತಿನಲ್ಲಿ ಸಂಕಲ್ಪ ಮಾಡಲಾಯಿತು. ಈ ಕಾಯ್ದೆ ಮೂಲಕ ರೈತರಿಂದ ಕಾರ್ಪೊರೇಟ್‌ಗಳು ಸಂಪತ್ತನ್ನು ಕಸಿದುಕೊಳ್ಳುವ ಹುನ್ನಾರ ಅಡಗಿದೆ.ವಾಸ್ತವದಲ್ಲಿ ಕಾರ್ಪೊರೇಟ್ ಕೃಷಿಯನ್ನು ಉತ್ತೇಜಿಸಲು ತರಲಾಗುತ್ತಿದೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದ್ದಾರೆ.

ಕೃಷಿ ಕಾಯ್ದೆಗಳಿಂದ ರೈತರಿಗೆ ಲಾಭ ಎಂದಿದ್ದ ತೋಮರ್
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳಿಂದ ರೈತರಿಗೆ ಲಾಭದಾಯವಾಗಿದ್ದು, ಅನ್ನದಾತರ ಪರವಾಗಿವೆ ಎಂಬುದಕ್ಕೆ ದೇಶವೇ ಸಾಕ್ಷಿ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದರು. "ಮೂರು ಕೃಷಿ ಕಾಯ್ದೆಗಳ ಬಗ್ಗೆ ಈ ಹಿಂದೆಯೂ ನಾವು ಚರ್ಚೆ ನಡೆಸಿದ್ದೇವೆ. ರೈತರಿಗೆ ಈ ಕಾಯ್ದೆಗಳಲ್ಲಿ ಲೋಪದೋಷಗಳು ಕಂಡು ಬಂದರೆ ಅದನ್ನು ಪ್ರಸ್ತಾಪ ಮಾಡಲಿ. ರೈತರ ಜೊತೆಗೆ ಚರ್ಚೆ ನಡೆಸುವುದಕ್ಕೆ ನಾವು ಸಿದ್ಧವಾಗಿದ್ದೇವೆ," ಎಂದು ತೋಮರ್ ತಿಳಿಸಿದ್ದರು.

ದೆಹಲಿಯ ಜಂತರ್ ಮಂತರ್ ನಲ್ಲಿ ರೈತರ ಹೋರಾಟ
ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಧಾನಿಯ ಮೂರು ಗಡಿಗಳಲ್ಲಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದಾರೆ.

ರೈತರು ವಿರೋಧಿಸುತ್ತಿರುವ ಕೃಷಿ ಕಾಯ್ದೆಗಳು ಯಾವುವು?
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications