ಸೀತೆ ಸುಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ 'ಏನ್' ಕೌಂಟರ್?
ದೆಹಲಿ, ಡಿಸೆಂಬರ್.06: ತೆಲಂಗಾಣ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಪೊಲೀಸರು ಎನ್ ಕೌಂಟರ್ ನಲ್ಲಿ ಮೂಲಕ ಮುಕ್ತಿ ನೀಡಿದರು. ಇನ್ನೊಂದೆಡೆ ಅದೇ ಪ್ರಕರಣ ಇಂದು ಲೋಕಸಭೆಯಲ್ಲೂ ಪ್ರತಿಧ್ವನಿಸಿತು.
ದೇಶದಲ್ಲಿ ಮಹಿಳಾ ದೌರ್ಜನ್ಯಕ್ಕೆ ತಡೆಯೇ ಇಲ್ಲದಂತೆ ಆಗಿದೆ ಎಂದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಛಾಟಿ ಬೀಸಿದವು. ಮಹಿಳಾ ಸುರಕ್ಷತೆ ಹಾಗೂ ದೌರ್ಜನ್ಯ ತಡೆ ಬಗ್ಗೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದರು.
ದೇಶದಲ್ಲಿ ಒಂದು ಕಡೆಯಲ್ಲಿ ಸರ್ಕಾರ ರಾಮನ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿದೆ. ಅದೇ ದೇಶದಲ್ಲಿ ಇನ್ನೊಂದು ಕಡೆ ಸೀತೆಯನ್ನು ಬಹಿರಂಗವಾಗಿ ಸುಟ್ಟು ಹಾಕುತ್ತಿದೆ. ಇದೆಂಥಾ ವ್ಯವಸ್ಥೆ ಎಂದು ಕೇಂದ್ರ ಸರ್ಕಾರವನ್ನು ಲಘುವಾಗಿ ಟೀಕಿಸಿದ್ದಾರೆ.

ಲೋಕಸಭೆಯಲ್ಲಿ ಪಶುವೈದ್ಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, ದೇಶದಲ್ಲಿ ಕಾನೂನು ವ್ಯವಸ್ಥೆಯೇ ಹದಗೆಟ್ಟು ಹೋಗಿದೆ. ಜನರಿಗೆ ಕಾನೂನಿನ ಬಗ್ಗೆ ಭಯವೇ ಇಲ್ಲದಂತೆ ಆಗಿದೆ. ಇದರ ಮಧ್ಯೆ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ಒತ್ತು ಕೊಡುತ್ತಿದೆಯೇ ವಿನಃ, ಸೀತೆಯ ರಕ್ಷಣೆಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಉನ್ನಾವೋ ಅತ್ಯಾಚಾರ ಪ್ರಕರಣವನ್ನೂ ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದರು, ಸರ್ಕಾರ ರಾಮ ಮಂದಿರ ನಿರ್ಮಿಸಲು ಹಾತೊರೆಯುತ್ತಿದೆ. ಇತ್ತ ಉನ್ನಾವೋದಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿ ಬಹಿರಂಗವಾಗಿಯೇ ಸುಟ್ಟು ಹಾಕಿದ್ದಾರೆ. ಒಂದು ಕಡೆ ರಾಮ ಮಂದಿರ ನಿರ್ಮಾಣ, ಇನ್ನೊಂದು ಕಡೆ ಸೀತೆಗೆ ಹಾಡಹಗಲೇ ಬೆಂಕಿ. ಇದು ಎಂಥಾ ವ್ಯವಸ್ಥೆಯಲ್ಲಿದ್ದೇವೆ ನಾವು ಎಂದು ಪ್ರಶ್ನೆ ಮಾಡಿದ್ದಾರೆ.
ನಂತರ ಹೈದ್ರಾಬಾದ್ ಪೊಲೀಸ್ ಎನ್ ಕೌಂಟರ್ ಪ್ರಕರಣದ ಬಗ್ಗೆ ಹೇಳಿದ ಅವರು, ನಾಲ್ವರು ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಪೊಲೀಸರ ಕಾರ್ಯವೈಖರಿಯನ್ನು ನಾವೀಗ ಬೆಂಬಲಿಸಬೇಕಿದೆ ಎಂದರು.












Click it and Unblock the Notifications