ದೆಹಲಿಯಲ್ಲಿ ಕೊರೊನಾವೈರಸ್ ಏರಿಕೆಗೆ ರೂಪಾಂತರಿಯ 9 ತಳಿಗಳು ಕಾರಣವೇ?
ನವದೆಹಲಿ, ಏಪ್ರಿಲ್ 21: ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದಕ್ಕೆ ಓಮಿಕ್ರಾನ್ ಹಾಗೂ ಅದರ 9 ಉಪ ಪ್ರಬೇಧಗಳೇ ಮುಖ್ಯ ಕಾರಣ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಏಪ್ರಿಲ್ 21ರಂದು ನಡೆಸಿದ ಕೊರೊನಾವೈರಸ್ ಸೋಂಕಿನ ಮಾದರಿ ಪರೀಕ್ಷೆ ವೇಳೆ ಬಿಎ.2.12.1 ಪ್ರಬೇಧ ಸೇರಿದಂತೆ ಓಮಿಕ್ರಾನ್ ರೂಪಾಂತರಿಗೆ ಸಂಬಂಧಿಸಿದ ಇತರೆ ಎಂಟು ತಳಿಗಳು ಪತ್ತೆಯಾಗಿವೆ. ಮಾದರಿಯ ಜೀನೋಮ್ ಸೀಕ್ವೆನ್ಸಿಂಗ್ ಅಧ್ಯಯನದ ನಂತರ ಫಲಿತಾಂಶ ಹೊರ ಬಿದ್ದಿದೆ.
ಕಳೆದ ಫೆಬ್ರವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಓಮಿಕ್ರಾನ್‌ನ BA.2 ಉಪ-ರೂಪಾಂತರವು BA.1 ತಳಿಗಿಂತಲೂ ಹೆಚ್ಚು ಹರಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹೇಳಿತ್ತು. ಆದಾಗ್ಯೂ, ಇದು ಮೂಲ ರೋಗಾಣುವಿಗಿಂತ ಹೆಚ್ಚಾ ಅಪಾಯಕಾರಿ ಅಲ್ಲದ ಕಾರಣಕ್ಕೆ ಯಾವುದೇ ರೀತಿ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿತ್ತು.

ನವದೆಹಲಿಯಲ್ಲಿ ಏರಿಕೆಯಾದ ಕೋವಿಡ್-19:
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನಗತಿಯ ಏರಿಕೆ ಕಂಡು ಬಂದಿದೆ. ಬುಧವಾರ ಒಂದೇ ದಿನದಲ್ಲಿ 1,009 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದು ಫೆಬ್ರವರಿ 10 ರಿಂದ ಅತ್ಯಧಿಕವಾಗಿದೆ. ಈ ಪ್ರಕರಣಗಳ ಪಾಸಿಟಿವಿಟಿ ದರವು ಶೇ.5.7ರಷ್ಟು ದಾಖಲಾಗಿದೆ. ಬುಧವಾರ ಒಂದು ದಿನದಲ್ಲಿ ಒಬ್ಬ ವ್ಯಕ್ತಿಯು ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 2,641ರಷ್ಟಾಗಿದೆ.
ದೇಶದಲ್ಲಿ ಒಂದೇ ದಿನ 2,380 ಮಂದಿಗೆ ಕೊವಿಡ್
ಭಾರತದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಹೊಸ ರೂಪಾಂತರಿ ಎಕ್ಸ್ಇ ತಳಿಯ ಭೀತಿ ಹೆಚ್ಚಾಗಿದೆ. ಇದರ ಮಧ್ಯೆ ದೇಶದಲ್ಲಿ ಮತ್ತೊಮ್ಮೆ ಸೋಂಕಿತ ಪ್ರಕರಣಗಳ ಸಂಖ್ಯೆ ಎರಡು ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 2,380 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 56 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 1231 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,049,974ಕ್ಕೆ ಏರಿಕೆಯಾಗಿದೆ. ಈ ಪೈಕಿ 42,514,479 ಸೋಂಕಿತರು ಗುಣಮುಖರಾಗಿದ್ದರೆ, 522,062 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 13,433 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications