ನಿರ್ಭಯಾ ಪ್ರಕರಣ: ಅತ್ಯಾಚಾರಿಯ ಮರುಪರಿಶೀಲನಾ ಅರ್ಜಿ ವಜಾ
ನವದೆಹಲಿ, ಜನವರಿ 31: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ಸಲ್ಲಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಅಪರಾಧ ಎಸಗಿದ ಸಂದರ್ಭದಲ್ಲಿ ತಾನು ಅಪ್ರಾಪ್ತ ವಯಸ್ಕನಾಗಿದ್ದರಿಂದ ತನಗೆ ಶಿಕ್ಷೆ ವಿಧಿಸಬಾರದು ಎಂಬ ಮನವಿಯನ್ನು ತಿರಸ್ಕರಿಸಿದ್ದ ಹಿಂದಿನ ತೀರ್ಪನ್ನು ಮರುಪರಿಶೀಲಿಸುವಂತೆ ಆತ ಮನವಿ ಮಾಡಿದ್ದ.
ತಾನು ಬಾಲಾಪರಾಧಿ ಎಂಬ ಆತನ ಪ್ರತಿಪಾದನೆಯನ್ನು ವಜಾಗೊಳಿಸಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಜ. 20ರಂದು ತಿರಸ್ಕರಿಸಿತ್ತು. ಆ ತೀರ್ಪನ್ನು ಪರಾಮರ್ಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾಗಿ ಅಪರಾಧಿ ಪರ ವಕೀಲ ಎ.ಪಿ. ಸಿಂಗ್ ತಿಳಿಸಿದ್ದರು. ಆದರೆ ಆ ಅರ್ಜಿಯನ್ನು ಕೂಡ ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಪ್ರಕರಣದ ಒಬ್ಬ ಅಪರಾಧಿಯ ಕ್ಷಮಾದಾನದ ಅರ್ಜಿ ಮಾತ್ರ ಬಾಕಿ ಉಳಿದಿದ್ದು, ಇತರೆ ಮೂವರನ್ನು ಗಲ್ಲಿಗೇರಿಸಲು ಅಡ್ಡಿಯಿಲ್ಲ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಫೆ. 1ರಂದು ಜಾರಿಯಾಗಬೇಕಿರುವ ಗಲ್ಲುಶಿಕ್ಷೆಗೆ ತಡೆ ನೀಡಬೇಕೆಂದು ಕೋರಿ ಅಪರಾಧಿಗಳು ಸಲ್ಲಿಸಿರುವ ಅರ್ಜಿಯನ್ನು ಜೈಲು ಅಧಿಕಾರಿಗಳು ದೆಹಲಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿರುವ ಅಪರಾಧಿಗಳ ಪರ ವಕೀಲರು, ಒಬ್ಬ ಅಪರಾಧಿಯ ಅರ್ಜಿ ಬಾಕಿ ಉಳಿದಿದ್ದಾಗ ಉಳಿದವರನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ನಿಯಮಗಳನ್ನು ವಿವರಿಸಿದರು.












Click it and Unblock the Notifications