Breaking: ನವದೆಹಲಿಯಲ್ಲಿ 9ನೇ ಮಂಕಿಪಾಕ್ಸ್ ಕೇಸ್; ದೇಶದಲ್ಲಿ ಒಟ್ಟು 14 ಪ್ರಕರಣ
ನವದೆಹಲಿ, ಸೆಪ್ಟೆಂಬರ್ 19: ರಾಷ್ಟ್ರ ರಾಜಧಾನಿಯಲ್ಲಿ 9ನೇ ಮಂಕಿಪಾಕ್ಸ್ ಸೋಂಕಿತ ಪ್ರಕರಣ ವರದಿಯಾಗಿದೆ. ನೈಜೀರಿಯಾದಿಂದ ಆಗಮಿಸಿದ 30 ವರ್ಷದ ಮಹಿಳೆಯಲ್ಲಿ ಮಂಕಿಪಾಕ್ಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ.
ಸೋಮವಾರ ನೈಜೀರಿಯಾದಿಂದ ಆಗಮಿಸಿದ ಮಹಿಳೆಯಲ್ಲಿ ಮಂಕಿಪಾಕ್ಸ್ ಸೋಂಕು ಇರುವುದು ದೃಢಪಟ್ಟಿದ್ದು, ಇದು ದೇಶದ 14ನೇ ಮಂಕಿಪಾಕ್ಸ್ ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ನವದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ಸೋಂಕಿತ ಮಹಿಳೆಯನ್ನು ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಕಳೆದ ಸೆಪ್ಟೆಂಬರ್ 16ರಂದು ಸೋಂಕಿತ ಮಹಿಳೆಯ ಮಾದರಿಯನ್ನು ಸಂಗ್ರಹಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಕೊಡಲಾಗಿತ್ತು. ಈ ಮಾದರಿ ಪರೀಕ್ಷೆಯ ವರದಿಯು ಸೋಮವಾರ ಬಂದಿದ್ದು, ಮಹಿಳೆಯಲ್ಲಿ ಮಂಕಿಪಾಕ್ಸ್ ಸೋಂಕು ಇರುವುದು ಖಾತ್ರಿಯಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ನವದೆಹಲಿಗೆ ಬಂದ ಮತ್ತೊಬ್ಬರಲ್ಲಿ ಸೋಂಕಿನ ಶಂಕೆ:
ಭಾನುವಾರ ನೈಜೀರಿಯಾದಿಂದ ನವದೆಹಲಿಗೆ ಆಗಮಿಸಿರುವ ಮತ್ತೊಬ್ಬ ಪ್ರಯಾಣಿಕರಲ್ಲೂ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಆ ವ್ಯಕ್ತಿಯನ್ನು ದೆಹಲಿಯ ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿಯ ಮಾದರಿಯನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಂತಿಮ ವರದಿಗಾಗಿ ಎದುರು ನೋಡಲಾಗುತ್ತಿದೆ. ಇದರ ಮಧ್ಯೆ ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 14ಕ್ಕೆ ಏರಿಕೆಯಾಗಿದೆ.
ಏನಿದು ಮಂಕಿಪಾಕ್ಸ್ ರೋಗ?:
ಮಂಕಿಪಾಕ್ಸ್ ಒಂದು ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬುಗೆ ಕಾರಣವಾಗುವ ವೈರಸ್‌ಗಳ ಒಂದೇ ಕುಟುಂಬಕ್ಕೆ ಸೇರಿದೆ. ಈ ರೋಗವು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಂತಹ ಪ್ರದೇಶಗಳಲ್ಲಿ ಸ್ಥಳೀಯವಾಗಿದೆ. ಆದರೆ ಇತ್ತೀಚೆಗೆ, ಆಸ್ಟ್ರೇಲಿಯಾ, ಯುಕೆ ಮತ್ತು ಯುಎಸ್ ಸೇರಿದಂತೆ ಇತರೆ ರಾಷ್ಟ್ರಗಳಲ್ಲೂ ಹೆಚ್ಚಾಗುತ್ತಿದೆ.
ಮಂಕಿಪಾಕ್ಸ್ ಸಿಡುಬಿಗೆ ಸಂಬಂಧಿಸಿದ ಒಂದು ಪಾಕ್ಸ್‌ವೈರಸ್ ಆಗಿದ್ದು, ಸಾಮಾನ್ಯವಾಗಿ ಮೊಡವೆ ಅಥವಾ ಗುಳ್ಳೆಗಳಂತಹ ಗಾಯಗಳನ್ನು ಉಂಟು ಮಾಡುತ್ತದೆ. ಇದರ ಜೊತೆ ಜ್ವರ, ತಲೆನೋವು, ಸ್ನಾಯು ನೋವು, ಶೀತ ಮತ್ತು ಉಸಿರಾಟ ಸಮಸ್ಯೆ ತರಹದ ಲಕ್ಷಣಗಳು ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತವೆ. ವೈರಸ್ ನಿಕಟ ಮತ್ತು ಆಗಾಗ್ಗೆ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದುವುದರಿಂದ ಯಾರಿಗಾದರೂ ಸೋಂಕು ಹರಡಬಹುದು. ಸೋಂಕಿತ ಪ್ರಾಣಿಗಳಿಂದ ಜನರು ಮಂಕಿಪಾಕ್ಸ್ ಸೋಂಕಿಗೆ ತುತ್ತಾಗುವ ಅಪಾಯವಿರುತ್ತದೆ.












Click it and Unblock the Notifications