ಆಮ್ ಆದ್ಮಿ ಲೋಕಸಭೆ ಚುನಾವಣೆವರೆಗೂ ನಿರಾತಂಕ
ನವದೆಹಲಿ, ಜ.3- ಭಾರತದ ರಾಜಕಾರಣದಲ್ಲಿ ಹೊಸ ಆಶಾಕಿರಣವಾಗಿ ಹೊರಹೊಮ್ಮಿರುವ ಆಮ್ ಆದ್ಮಿ ಪಕ್ಷವು ನಿರೀಕ್ಷೆಯಂತೆ ವಿಶ್ವಾಸಮತವನ್ನು ನಿರಾಯಾಸವಾಗಿ ಗೆದ್ದಿದೆ. ಆದರೆ ಮುಂದೆ ಹೇಗೋ/ ಏನೋ ಎಂಬುದೇ ಸದ್ಯದ ಆತಂಕ.
ಗಮನಾರ್ಹವೆಂದರೆ ಒಮ್ಮೆ ವಿಶ್ವಾಸಮತ ಸಾಬೀತಾದ ಬಳಿಕ 6 ತಿಂಗಳ ಕಾಲ ಆ ಸರಕಾರ ಅಬಾಧಿತವಾಗಿ ಅಧಿಕಾರದಲ್ಲಿರಬಹುದು. ಹಾಗಾಗಿ ಮುಂದಿನ ಜೂನ್ ವರೆಗೂ ಅಂದರೆ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದು, ದೆಹಲಿಯಲ್ಲಿ ನೂತನ ಕೇಂದ್ರ ಸರಕಾರ ಸ್ಥಾಪನೆಯಾಗುವವರೆಗೂ AAP ಸರಕಾರ ಸುಭದ್ರವಾಗಿರುತ್ತದೆ.

70 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇಜ್ರಿವಾಲ್ ನೇತೃತ್ವದ ಅಲ್ಪಮತದ ಸರಕಾರ 36 ಸದಸ್ಯರ ಬೆಂಬಲವನ್ನು ನಿರೂಪಿಸಬೇಕಾಗಿತ್ತು. ಆಮ್ ಆದ್ಮಿ ಪಕ್ಷದ 28, ಕಾಂಗ್ರೆಸ್ 7 (ಸ್ಪೀಕರ್ ಹೊರತುಪಡಿಸಿ), ಜೆಡಿಯು ಪಕ್ಷದ ಒಬ್ಬ ಶಾಸಕ ಹಾಗೂ ಒಬ್ಬ ಪಕ್ಷೇತರ ಶಾಸಕನ ಬೆಂಬಲದಿಂದಾಗಿ ಆಮ್ ಆದ್ಮಿ ಪಕ್ಷಕ್ಕೆ 37 ಶಾಸಕರ ಬೆಂಬಲ ದೊರೆಯಿತು. ಹೀಗಾಗಿ ಅರವಿಂದ ಕೇಜ್ರಿವಾಲ್ ಅವರು ನಿರಾಯಾಸವಾಗಿ ವಿಶ್ವಾಸಮತ ಗೆದ್ದಿರು.
ಲೋಕೋಪಯೋಗಿ ಸಚಿವ ಮನೀಶ್ ಸಿಸೋಡಿಯಾ ಅವರು ವಿಶ್ವಾಸಮತ ಯಾಚನೆ ನಿಲುವಳಿ ಮಂಡಿಸಿದ ಬಳಿಕ ನಾಲ್ಕೂವರೆ ತಾಸುಗಳ ಕಾಲ ಚರ್ಚೆ ನಡೆಯಿತು. ಕೊನೆಯಲ್ಲಿ 25 ನಿಮಿಷಗಳ ಕಾಲ ಭಾವನಾತ್ಮಕ ಭಾಷಣ ಮಾಡಿದ ಕೇಜ್ರಿವಾಲ್ ಅವರು 'ನೀವು ಯಾರ ಕಡೆ ಇದ್ದೀರಿ ಎಂಬುದನ್ನು ನಿರೂಪಿಸಿ' ಎಂದು ಎಲ್ಲ ಪಕ್ಷದ ಶಾಸಕರನ್ನು ಕೋರಿದರು.
ನಂತರ ಹಂಗಾಮಿ ಸ್ಪೀಕರ್ ಕಾಂಗ್ರೆಸ್ಸಿನ ಮತೀನ್ ಅಹಮದ್ ಅವರು ಸರ್ಕಾರದ ಪರ ಇರುವವರು ಎದ್ದು ನಿಲ್ಲುವಂತೆ ಸೂಚಿಸಿದರು. ಅದರಂತೆ AAP ಪರ ಶಾಸಕರು ಒಬ್ಬೊಬ್ಬರಾಗಿ ಎದ್ದು ನಿಲ್ಲುತ್ತಿದ್ದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸರಳ ಬಹುಮತವಿರುವುದನ್ನು ಖಾತ್ರಿ ಪಡಿಸಿಕೊಂಡ ಸ್ಪೀಕರ್, ವಿಶ್ವಾಸಮತ ಯಾಚನೆ ಪರೀಕ್ಷೆಯಲ್ಲಿ ಕೇಜ್ರಿವಾಲ್ ಉತ್ತೀರ್ಣರಾಗಿದ್ದಾರೆ ಎಂದು ಘೋಷಿಸಿ, ಸದನವನ್ನು ಮುಂದೂಡಿದರು.
ಕೇಜ್ರಿವಾಲಾರಿಂದ ಮೋದಿ ಕಲಿಯಬೇಕಾಗಿದೆ:
ಆಮ್ ಆದ್ಮಿ ಪಕ್ಷವನ್ನು ನೇರವಾಗಿ ಬೆಂಬಲಿಸುವ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಕಾಂಗ್ರೆಸ್ ಪಕ್ಷವು (ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್) ನಿನ್ನೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ಆಮ್ ಆದ್ಮಿ ಅರವಿಂದ್ ಕೇಜ್ರಿವಾಲಾರಿಂದ ನರೇಂದ್ರ ಮೋದಿ ಅವರು ಸಂಯಮ ಹಾಗೂ ಮಾನವೀಯತೆಯನ್ನು ಕಲಿಯಬೇಕಾಗಿದೆ' ಎಂದಿದ್ದಾರೆ.












Click it and Unblock the Notifications