ಪಟೇಲರನ್ನು ನೆಹರು ಕೋಮುವಾದಿ ಎಂದಿದ್ದರು : ಅಡ್ವಾಣಿ
ನವದೆಹಲಿ, ನ.5 : ಪ್ರಧಾನಿ ಜವಾಹರಲಾಲ್ ನೆಹರು ಅವರು ತಮ್ಮ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಪಟೇಲರನ್ನು 'ಕಟ್ಟಾ ಕೋಮುವಾದಿ' ಎಂದು ಕರೆದಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ. ಆ ಮೂಲಕ ಸರ್ದಾರ್ ವಲ್ಲಭಭಾಯ್ ಪಟೇಲ್ ಕುರಿತಾಗಿ ಬಿಜೆಪಿ ಮತ್ತೊಂದು ವಿವಾದವನ್ನು ಬಿಜೆಪಿ ಕೆದಕಿದೆ.
ಈ ಕುರಿತು ತಮ್ಮ ಬ್ಲಾಗ್ ನಲ್ಲಿ ಬರೆದಿರುವ ಎಲ್.ಕೆ.ಅಡ್ವಾಣಿ, ಸ್ವಾತಂತ್ರ್ಯದ ಬಳಿಕ ಭಾರತದ ಒಕ್ಕೂಟದಲ್ಲಿ ಸೇರಿಕೊಳ್ಳಲು ನಿರಾಕರಿಸಿದ್ದ ಹೈದರಾಬಾದ್ ನಿಯಂತ್ರಣಕ್ಕೆ ಸೇನೆಯನ್ನೇ ಕಳುಹಿಸಬೇಕೆಂಬ ಗೃಹ ಸಚಿವ ಸರ್ದಾರ್ ಪಟೇಲ್ ಅವರ ಸಲಹೆ ಕೇಳಿದ ನೆಹರು, ಪಟೇಲರನ್ನು 'ಪೂರ್ತಿ ಕೋಮುವಾದಿ' ಎಂದು ಕರೆದಿದ್ದರು ಎಂದು ಹೇಳಿದ್ದಾರೆ.
ಎಂ.ಕೆ.ಕೆ.ನಾಯರ್ ಎಂಬವರು ಬರೆದ 'ದಿ ಸ್ಟೋರಿ ಆಫ್ ಆನ್ ಎರಾ ಟೋಲ್ಡ್ ವಿದೌಟ್ ಇಲ್ ವಿಲ್' ಎಂಬ ಪುಸ್ತಕದಲ್ಲಿ ಈ ಕುರಿತ ಮಾಹಿತಿ ಇದೆ ಎಂದು ಅಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ನಿಜಾಮರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೊದಲು ಪಟೇಲ್ ಮತ್ತು ನೆಹರು ನಡುವೆ ಭಾರಿ ವಾಗ್ಯುದ್ಧ ನಡೆದಿತ್ತು ಎಂದು ಪುಸ್ತಕ ಉಲ್ಲೇಖಿಸಿ ಅಡ್ವಾಣಿ ಬರೆದಿದ್ದಾರೆ.
"ಹೈದರಾಬಾದ್ ನಿಜಾಮರು ಪಾಕಿಸ್ತಾನದತ್ತ ಹೆಚ್ಚು ಒಲವು ಹೊಂದಿದ್ದರು. ಅಲ್ಲಿಗೆ ಸಂಧಾನಕಾರರನ್ನು ಕಳುಹಿಸಿದ್ದರು ಮತ್ತು ದೊಡ್ಡ ಮೊತ್ತದ ಹಣವನ್ನು ಅಲ್ಲಿನ ಸರ್ಕಾರಕ್ಕೆ ನೀಡಿದ್ದರು. ಸ್ಥಳೀಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದರು" ಎಂದು ಸಚಿವ ಸಂಪುಟ ಸಭೆಯಲ್ಲಿ ಪಟೇಲರು ವಿಷಯ ಪ್ರಸ್ತಾಪಿಸಿ, ಹೈದರಾಬಾದಿನ ಉಗ್ರ ಆಳ್ವಿಕೆ ವಿರುದ್ಧ ಸೇನೆಯನ್ನೇ ಕಳುಹಿಸಬೇಕೆಂದು ಆಗ್ರಹಿಸಿದ್ದರು.
ಆದರೆ, ಪ್ರಧಾನಿ ನೆಹರು ತಾಳ್ಮೆ ಕಳೆದುಕೊಂಡು "ನೀವೊಬ್ಬ ಪೂರ್ತಿ ಕೋಮುವಾದಿ" ನಾನೆಂದಿಗೂ ನಿಮ್ಮ ಶಿಫಾರಸನ್ನು ಒಪ್ಪಲಾರೆ ಎಂದು ಕೂಗಾಡಿದ್ದರು. ಪಟೇಲ್ ಇದರಿಂದ ವಿಚಲಿತರಾಗಲಿಲ್ಲ, ಆದರೆ ಕಾಗದಪತ್ರ ಹಿಡಿದುಕೊಂಡು ಸಭೆಯಿಂದ ಹೊರನಡೆದುಬಿಟ್ಟರು ಎಂದು ಆಡ್ವಾಣಿ ಅವರು ನಾಯರ್ ಪುಸ್ತಕವನ್ನು ಉಲ್ಲೇಖಿಸಿ ಬ್ಲಾಗಿನಲ್ಲಿ ಬರೆದಿದ್ದಾರೆ.
ಅಹಮದಾಬಾದ್ ನಲ್ಲಿ ಪಟೇಲ್ ಅವರ 138ನೇ ಜಯಂತಿ ಸಂದರ್ಭ, ಏಕತಾ ಮೂರ್ತಿಗೆ ಶಂಕುಸ್ಥಾಪನೆ ಮಾಡುವ ವೇಳೆಯೂ ಅಡ್ವಾಣಿ ಅವರು ಭಾರತದ ಪ್ರಥಮ ಗೃಹ ಸಚಿವ ಪಟೇಲ್ ಅವರನ್ನು ಹೊಗಳಿದ್ದರು. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಹ ಭಾರತಕ್ಕೆ ಪಟೇಲ್ ಜಾತ್ಯತೀತತೆ ಬೇಕು, ಓಟ್ ಬ್ಯಾಂಕ್' ಜಾತ್ಯತೀತತೆ ಬೇಡ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. (ಭಾರತಕ್ಕೆ ಪಟೇಲರ ಜ್ಯಾತ್ಯತೀತತೆ ಬೇಕು)