ಎಂಜೆ ಅಕ್ಬರ್ ಪರಿಪೂರ್ಣ ಸಂಭಾವಿತ: ಮಾಜಿ ಮಹಿಳಾ ಸಹೋದ್ಯೋಗಿಯ ಬೆಂಬಲ
ನವದೆಹಲಿ, ನವದೆಹಲಿ, 13: ಸಹೋದ್ಯೋಗಿಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಪತ್ರಕರ್ತ, ಕೇಂದ್ರದ ಮಾಜಿ ಸಚಿವ ಎಂಜೆ ಅಕ್ಬರ್ ಅವರ ಪರವಾಗಿ ಮಾಜಿ ಮಹಿಳಾ ಸಹೋದ್ಯೋಗಿಯೊಬ್ಬರು ಧ್ವನಿ ಎತ್ತಿದ್ದಾರೆ.
'ಎಂಜೆ ಅಕ್ಬರ್ ಅವರು ಒಬ್ಬ ಪರಿಪೂರ್ಣ ಜಂಟಲ್ ಮ್ಯಾನ್' ಎಂದು ಅವರೊಂದಿಗೆ 15 ವರ್ಷ ಕೆಲಸ ಮಾಡಿದ್ದ ಜೊಯೀತಾ ಬಸು ಹೇಳಿದ್ದಾರೆ. ಅಲ್ಲದೆ, ಈ ಆರೋಪದ ಹಿಂದೆ ಬೇರೆ ಉದ್ದೇಶಗಳಿರುವಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಕ್ಬರ್ ಸ್ಥಾಪಿಸಿದ 'ದಿ ಸಂಡೇ ಗಾರ್ಡಿಯನ್' ಪತ್ರಿಕೆಯ ಸಂಪಾದಕರಾದ ಜೊಯೀತಾ, ದೂರುದಾರರ ಆರು ಸಾಕ್ಷಿಗಳಲ್ಲಿ ಒಬ್ಬರಾಗಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದರು.

ಅಕ್ಬರ್ ಅವರು ಅಕ್ಟೋಬರ್‌ನಲ್ಲಿ ನಡೆದ ವಿಚಾರಣೆ ವೇಳೆ ತಮ್ಮ ಹೇಳಿಕೆ ದಾಖಲಿಸಿದ್ದರು.
ಪತ್ರಕರ್ತೆಯಾಗಿ ವೃತ್ತಿ ಆರಂಭಿಸಿದ ಕೆಲವು ವರ್ಷಗಳ ನಂತರ 1998ರಲ್ಲಿ ಅಕ್ಬರ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು. ಅಕ್ಬರ್ ಸಂಪಾದಕರಾಗಿದ್ದ ಏಷ್ಯನ್ ಏಜ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. '1998ರ ಡಿಸೆಂಬರ್ ಮಧ್ಯಭಾಗದಲ್ಲಿ ಏಷ್ಯನ್ ಏಜ್ ಪತ್ರಿಕೆಯಲ್ಲಿ ಕೆಲಸ ಆರಂಭಿಸಿದೆ. 2008ರ ಏಪ್ರಿಲ್-ಮೇ ವರೆಗೂ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ' ಎಂದು ಜೊಯೀತಾ ತಿಳಿಸಿದ್ದಾರೆ.
ಅಕ್ಬರ್ ಅವರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಈ ಆರೋಪಗಳ ಸಂಚನ್ನು ರೂಪಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ನಾನು ಅವರನ್ನು ಎಂದಿಗೂ ಪರಿಪೂರ್ಣ ಸಂಭಾವಿತ ಎಂದೇ ಪರಿಗಣಿಸಿದ್ದೇನೆ. ಅವರು ನನ್ನ ಮತ್ತು ಸಾರ್ವಜನಿಕರ ಕಣ್ಣಿನಲ್ಲಿ ಅಪೂರ್ವ ಗೌರವವನ್ನು ಹೊಂದಿದ್ದಾರೆ. ನಾವು ಜತೆಯಾಗಿ ಕೆಲಸ ಮಾಡಿದ ಸಂಸ್ಥೆಗಳಲ್ಲಿ ಅವರ ಬಗ್ಗೆ ಯಾವ ಸಿಬ್ಬಂದಿಯೂ ಕೆಟ್ಟದಾಗಿ ಮಾತನಾಡಿದ್ದನ್ನು ಕೇಳಿಲ್ಲ' ಎಂದು ಜೊಯೀತಾ ತಿಳಿಸಿದ್ದಾರೆ.
ಮುಂದಿನ ವಿಚಾರಣೆ ಡಿಸೆಂಬರ್ 7ರಂದು ನಡೆಯಲಿದೆ. ಏಷ್ಯನ್ ಏಜ್‌ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಎಂಜೆ ಅಕ್ಬರ್ ಅವರು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು, ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಅವರ ಮಾಜಿ ಸಹೋದ್ಯೋಗಿ ಪ್ರಿಯಾ ರಮಣಿ ದೂರು ದಾಖಲಿಸಿದ್ದರು.












Click it and Unblock the Notifications