ವಿವಾಹ ನೊಂದಣಿ ಪತ್ರಕ್ಕೂ ಬಂತು ತತ್ಕಾಲ್
ನವದೆಹಲಿ, ಮೇ 11: ಇನ್ನು ಮುಂದೆ ವಿವಾಹ ನೋಂದಣಿ ಪತ್ರಕ್ಕೆ ಕಾಯುವ ಅಗತ್ಯವಿಲ್ಲ. ಕೇವಲ 24 ಗಂಟೆಯೊಳಗೆ ನಿಮ್ಮ ವಿವಾಹ ನೋಂದಣಿ ಪತ್ರ ನಿಮ್ಮ ಕೈ ಸೇರುವ ಸದವಕಾಶ ಬಂದಿದೆ. ವೀಸಾ ಮತ್ತು ರೈಲ್ವೆ ಟಿಕೆಟ್ ಪಡೆಯುವ ಮಾದರಿಯಲ್ಲಿ ಇನ್ನು ಮುಂದೆ 24 ಗಂಟೆಯೊಳಗೆ ತತ್ಕಾಲ್ ಸೇವೆಯಲ್ಲಿ ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ಇಂದಿನ ಧಾವಂತದ ಜೀವನದಲ್ಲಿ ಅನೇಕ ಮದುವೆಗಳೇ ತಾತ್ಕಾಲಿಕವಾಗುತ್ತಿರುವಾಗ ಈ ತತ್ಕಾಲ್ ಸೇವೆ ಬೇರೆ ಬೇಕಾ? ಎಂದು ಕುಹಕಿಗಳು ಕೇಳಿದರೆ ಆಶ್ಚರ್ಯವೇನೂ ಇಲ್ಲ. ಏಕೆಂದರೆ ಪರಿಸ್ಥಿತಿಯೂ ಹಾಗೆಯೇ ಇದೆ.
ಶೀಘ್ರಮೇವ ಕಲ್ಯಾಣ ಪ್ರಮಾಣ ಪತ್ರ ಸಿದ್ಧಿರಸ್ತು:

ಆದರೂ marriage certificate ಅನೇಕರಿಗೆ ತುರ್ತಾಗಿ ಬೇಕಾಗುತ್ತದೆ. ಅಂತಹವರಿಗಾಗಿ ಈ ಸೇವೆ ಜಾರಿಗೆ ಬಂದಿರುವುದು ಸ್ತುತ್ಯರ್ಹ. ಹೇಳಬೇಕು ಅಂದರೆ 2006ರಲ್ಲಿಯೇ ಸುಪ್ರೀಂಕೋರ್ಟ್ ನೂತನ ಸತಿ-ಪತಿಗೆ ಶೀಘ್ರವೇ ಮದುವೆ ಪ್ರಮಾಣ ಪತ್ರವನ್ನು ನೀಡುವಂತೆ ಸೂಚಿಸಿತ್ತು.
ಇದೀಗ, ಪ್ರಾಯೋಗಿಕವಾಗಿ ಇದು ದೆಹಲಿಯಲ್ಲಿ ಜಾರಿಗೆ ಬಂದಿದ್ದು, ಇನ್ನು ಮುಂದೆ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತತ್ಕಾಲ್ ಸೇವೆಯಲ್ಲಿ 24 ಗಂಟೆಯೊಳಗೆ ವಿವಾಹ ಪ್ರಮಾಣ ಪತ್ರವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಇದನ್ನು ಹಂತ ಹಂತವಾಗಿ ದೇಶದ ಇತರೆ ರಾಜ್ಯಗಳಲ್ಲೂ ಜಾರಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದೀಗ ದೆಹಲಿಯ ಕಂದಾಯ ಇಲಾಖೆಯ ಮೂಲಕ ತತ್ಕಾಲ್ ಸೇವೆಯಲ್ಲಿ 24 ಗಂಟೆಯೊಳಗೆ ಮ್ಯಾರೇಜ್ ಸರ್ಟಿಫಿಕೇಟ್ ನೀಡುವುದಾಗಿ ಅವರು ತಿಳಿಸಿದ್ದಾರೆ. ಹಿಂದೂ ವಿವಾಹ ಕಾಯ್ದೆ ಪ್ರಕಾರ ಪ್ರಮಾಣ ಪತ್ರ ಪಡೆಯಲು ಅರ್ಜಿಗೆ 100 ರೂಪಾಯಿ ವಿಶೇಷ ವಿವಾಹ ಕಾಯ್ದೆ ಅರ್ಜಿಗೆ 150 ರೂ. ಶುಲ್ಕ ನೀಡಬೇಕಾಗುತ್ತದೆ.
ಕೆಲವರು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಪ್ಪಿಸಲು ತತ್ಕಾಲ್ ಸೇವೆಯಲ್ಲಿ ಈ ಯೋಜನೆಯನ್ನು ತರಲಾಗುವುದು. ಅನೇಕ ಮಂದಿ 10,000 ವರೆಗೂ ಹಣ ಕೊಟ್ಟು ವಿವಾಹ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಇದಕ್ಕಾಗಿ ಈ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ಇದಕ್ಕೆ ಆಧುನಿಕತೆಯ ಮೆರುಗು ನೀಡಲು ಸಹ ಇಲಾಖೆ ಆಲೋಚಿಸುತ್ತಿದೆ. ಅಂದರೆ ಇಂಟರ್ನೆಟ್ ಮೂಲಕವೂ ಸರ್ಟಿಫಿಕೇಟ್ ಪಡೆಯಬಹುದಾಗಿದೆ. ಅದಕ್ಕಾಗಿ ಮುಂದಿನ ತಿಂಗಳ ವೇಳೆಗೆ ಇಲಾಖೆಯು ಹೊಸ ವಬೆಬ್ ಸೈಟ್ ಸೇವೆ ಪ್ರಾರಂಭಿಸಲಿದೆ.












Click it and Unblock the Notifications