Breaking; ಮನೀಷ್ ಸಿಸೋಡಿಯಾ ವಿದೇಶ ಪ್ರವಾಸಕ್ಕೆ ನಿರ್ಬಂಧ
ನವದೆಹಲಿ, ಆಗಸ್ಟ್ 21; ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೇರಿದಂತೆ 12 ಜನರು ವಿದೇಶ ಪ್ರವಾಸ ಕೈಗೊಳ್ಳದಂತೆ ನಿರ್ಬಂಧ ಹೇರಲಾಗಿದೆ.
ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಶುಕ್ರವಾರ ಮನೀಷ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು.
ಈ ಪ್ರಕರಣದಲ್ಲಿ ಮನೀಷ್ ಸಿಸೋಡಿಯಾ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಈಗ ಸಿಬಿಐ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದು, ವಿದೇಶ ಪ್ರಯಾಣಕ್ಕೆ ನಿರ್ಬಂಧ ಹೇರಿದೆ.

ಮನೀಷ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಡೆದ ವಿಚಾರವೇ ಕೇಂದ್ರ ಸರ್ಕಾರ ಮತ್ತು ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರದ ನಡುವೆ ಜಟಾಪಟಿಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ವಿದೇಶ ಪ್ರಯಾಣಕ್ಕೆ ನಿರ್ಬಂಧ ಹೇರಿದ್ದು ಎಎಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಶನಿವಾರ ಮನೀಷ್ ಸಿಸೋಡಿಯಾ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಅರವಿಂದ ಕೇಜ್ರಿವಾಲ್ ಬಗ್ಗೆ ಇರುವ ಭೀತಿಯಿಂದಾಗಿ ಬಿಜೆಪಿಯು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಸುವ ಯತ್ನ ಮಾಡುತ್ತಿದೆ" ಎಂದು ಆರೋಪಿಸಿದ್ದರು.
ಸಿಬಿಐ ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಎಫ್‌ಐಆರ್ ದಾಖಲು ಮಾಡಿದೆ. ಒಟ್ಟು 15 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಮನೀಷ್ ಸಿಸೋಡಿಯಾ ಮೊದಲ ಆರೋಪಿ.
ಪ್ರಕರಣದಲ್ಲಿ ಮನೀಷ್ ಸಿಸೋಡಿಯಾ ಮೊದಲ ಆರೋಪಯಾಗಿದ್ದರೂ ಬಿಜೆಪಿ ಪ್ರಕರಣದ ಸೂತ್ರಧಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಎಂದು ಆರೋಪ ಮಾಡುತ್ತಿದೆ.
ಮನೀಷ್ ಸಿಸೋಡಿಯಾ ಪ್ರಕರಣದ ಸಂಬಂಧ ಹೇಳಿಕೆ ನೀಡಿದ್ದು, "ದೆಹಲಿ ಅಬಕಾರಿ ನೀತಿ ಸಂಪೂರ್ಣ ಪಾರದರ್ಶಕವಾಗಿದೆ. ಯಾವುದೇ ಹಗರಣ ನಡೆದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications