ಸುಷ್ಮಾರನ್ನು ಇನ್ನಿಲ್ಲದಷ್ಟು ಮಿಸ್ ಮಾಡಿಕೊಳ್ಳುತ್ತೇನೆ: ಅಡ್ವಾಣಿ
ನವದೆಹಲಿ, ಆಗಸ್ಟ್ 07: "ಅವರು ನನ್ನ ಜನ್ಮದಿನದಂದು ಯಾವತ್ತಿಗೂ ಮರೆಯದೆ ನನ್ನಿಷ್ಟದ ಚಾಕೋಲೇಟ್ ಕೇಕ್ ಹಿಡಿದು ಬರುತ್ತಿದ್ದುದನ್ನು ಹೇಗೆ ಮರೆಯಲಿ..? ಆಕೆಯ ಅಕಾಲಿಕ ಮರಣ ನನಗೆ ವ್ಯಕ್ತಪಡಿಸಲಾರದಷ್ಟು ಆಘಾತವನ್ನು ನೀಡಿದೆ. ಆಕೆಯನ್ನು ನಾನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ತಮ್ಮ ಆಪ್ತ ಒಡನಾಡಿ ಸುಷ್ಮಾ ಸ್ವರಾಜ್ ಅವರನ್ನು ನೆನೆದು ಭಾವುಕರಾಗಿದ್ದಾರೆ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ.
ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ
"ನನ್ನ ಆತ್ಮೀಯ ಸಹೋದ್ಯೋಗಿಗಳಲ್ಲಿ ಸುಷ್ಮಾ ಪ್ರಮುಖರು. ಆಕೆ ಬಿಜೆಪಿಯಲ್ಲಿ ಕೆಲಸ ಆರಂಭಿಸಿದಾಗಿನಿಂದಲೂ ನಾನು ಆಕೆಯನ್ನು ಬಲ್ಲೆ. ನಾನು ಬಿಜೆಪಿ ಅಧ್ಯಕ್ಷರಾಗಿದ್ದಾಗ ಅವರು ಬಿಜೆಪಿಯ ಯುವ ನಾಯಕಿಯಾಗಿ ನಮ್ಮ ತಂಡವನ್ನು ಸೇರಿಕೊಂಡರು" ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು ಮಾಜಿ ಉಪಪ್ರಧಾನಿ ಅಡ್ವಾಣಿ.
"ಆಕೆಯಲ್ಲಿದ್ದ ಅತ್ಯುತ್ಸಾಹ, ದೇಶಸೇವೆಯ ತುಡಿತದಿಂದ ಆಕೆ ಎಲ್ಲ ಮಹಿಳೆಯರ ಆದರ್ಶವಾಗಿ ಬೆಳೆದರು. ನಮ್ಮ ಪಕ್ಷದ ಅತ್ಯಂತ ಪ್ರಮುಖ ನಾಯಕರಾಗಿಯೂ ಗುರುತಿಸಿಕೊಂಡರು. ಒಬ್ಬ ಪ್ರಖರ ವಾಗ್ಮಿಯಾಗಿದ್ದ ಅವರು, ಎಂಥ ಸಂದರ್ಭದಲ್ಲೂ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವ, ತಮ್ಮ ಅಭಿಪ್ರಾಯದ ಬಗ್ಗೆ ಸಾಕಷ್ಟು ಸ್ಪಷ್ಟತೆ ಹೊಂದಿದ್ದ ನಾಯಕಿ" ಎಂದು ಮೆಚ್ಚುಗೆ ಸೂಚಿಸಿದರು.

"ಒಬ್ಬ ರಾಜಕಾರಣಿ ಮಾತ್ರವಲ್ಲದೆ, ಆಕೆ ಒಬ್ಬ ಶ್ರೇಷ್ಠ ವ್ಯಕ್ತಿ. ತಮ್ಮ ಅಕ್ಕರೆ ತುಂಬಿದ ಮಾತು, ಪ್ರೀತಿ ತುಂಬಿದ ನಡೆಯಿಂದ ಎಲ್ಲರ ಹೃದಯವನ್ನೂ ಸ್ಪರ್ಶಿಸಬಲ್ಲ ತಾಕತ್ತಿದ್ದವರು ಸುಷ್ಮಾ. ಅವರು ಎಷ್ಟೇ ಬ್ಯಸಿಯಾಗಿದ್ದಿರಲಿ, ನನ್ನ ಜನ್ಮದಿನದಂದು ನನ್ನಿಷ್ಟದ ಚಾಕೋಲೇಟ್ ಕೇಕ್ ಹಿಡಿದು ಬರುತ್ತಿದ್ದುದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎನ್ನುವಾಗ ಅಡ್ವಾಣಿ ಅವರ ಕಣ್ಣಂಚಿನಲ್ಲಿ ಅರಿವಿಲ್ಲದೆ ನೀರು ಇಣುಕುತ್ತದೆ!
"ಈ ದೇಶ ಒಬ್ಬ ಮಹಾನ್ ನಾಯಕಿಯನ್ನು ಕಳಲೆದುಕೊಂಡಿದೆ. ನನ್ನ ಪ್ರಕಾರ ಇದು ತುಂಬಲಾರದ ನಷ್ತ. ನಾನಂತೂ ಸುಷ್ಮಾ ಜೀ ಅವರ ಗೈರು ಹಾಜರಿಯನ್ನು ಇನ್ನಿಲ್ಲದಷ್ಟು ಮಿಸ್ ಮಾಡಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸ್ವರಾಜ್ ಜೀ, ಬಾಂಸುರಿ ಮತ್ತು ಕುಟುಂಬದ ಎಲ್ಲಾ ಸದಸ್ಯರಿಗೂ ನನ್ನ ಸಂತಾಪಗಳು. ಓಂ ಶಾಂತಿ" ಎಂದು ಅಡ್ವಾಣಿ ಸಂತಾಪ ಸೂಚಿಸಿದ್ದಾರೆ.












Click it and Unblock the Notifications