ನವದೆಹಲಿ : ಬಿಜೆಪಿ, ಎಎಪಿ ಭರವಸೆಯಲ್ಲಿನ 5 ಸಾಮ್ಯತೆಗಳು
ನವದೆಹಲಿ, ಫೆ. 4: ದೆಹಲಿ ವಿಧಾನಸಭೆ ಚುನಾವಣೆಗಾಗಿ ಆಮ್ ಆದ್ಮಿಯ 70 ಅಂಶಗಳ ಪ್ರಣಾಳಿಕೆಗೆ ಬದಲಾಗಿ ಬಿಜೆಪಿಯು 270ಕ್ಕೂ ಹೆಚ್ಚು ಅಂಶಗಳ ದೂರದೃಷ್ಟಿ ದಾಖಲೆ ಬಿಡುಗಡೆ ಮಾಡಿದೆ. ಆದರೆ, ಇವೆರಡೂ ಕೆಲವು ಸಾಮಾನ್ಯ ಅಂಶಗಳನ್ನು ಹೊಂದಿವೆ.
ಬಿಜೆಪಿ ಹಾಗೂ ಆಮ್ ಆದ್ಮಿ ವಿಭಿನ್ನ ತತ್ವ ಸಿದ್ಧಾಂತಗಳನ್ನು ಹೊಂದಿದ್ದರೂ ದೆಹಲಿ ಅಭಿವೃದ್ಧಿ ಕುರಿತು ಕೆಲವು ಸಾಮಾನ್ಯ ಅಂಶಗಳನ್ನು ಹೊಂದಿದ್ದಾರೆ. ಬಿಜೆಪಿ ದೀರ್ಘ ಕಾಲಿಕ ಯೋಜನೆ ಪ್ರಕಟಿಸಿದ್ದರೆ, ಆಮ್ ಆದ್ಮಿ ವಿಶೇಷವಾಗಿ ತುರ್ತು ಅಗತ್ಯಗಳಿಗೆ ಪ್ರಾಮುಖ್ಯತೆ ನೀಡಿದೆ.

ಎರಡೂ ಪಕ್ಷಗಳಲ್ಲಿ ಕಂಡುಬಂದಿರುವ ಸಾಮಾನ್ಯ ಅಂಶಗಳು ಇಂತಿವೆ.
1) ನವದೆಹಲಿಗೆ ವಿಶೇಷ ಸ್ಥಾನ ಮಾನ
ಬಿಜೆಪಿ ನವದೆಹಲಿಗೆ ಜಾಗತಿಕ ಮಟ್ಟದ ಸ್ಥಾನಮಾನ, ಒಂದೇ ಸ್ಮಾರ್ಟ್ ಕಾರ್ಡ್ ಮೂಲಕ ಎಲ್ಲ ಸಾರ್ವಜನಿಕ ಸಂಚಾರಿ ವ್ಯವಸ್ಥೆಗಳ ಮಧ್ಯೆ ಸಂಪರ್ಕ, ಜಾಗತಿಕ ಮಟ್ಟದ ಬಸ್ ನಿಲ್ದಾಣ, ಸಾರ್ವಜನಿಕ ವಾಹನಗಳಲ್ಲಿ ಜಿಪಿಎಸ್ ಮತ್ತು ಸಿಸಿಟಿವಿ ವ್ಯವಸ್ಥೆ. [ಬಿಜೆಪಿ ದೂರದೃಷ್ಟಿಯಲ್ಲಿ 270 ಅಂಶ]
ಆಮ್ ಆದ್ಮಿಯು ವಿಐಪಿ ಸಂಸ್ಕೃತಿ ಕೊನೆಗೊಳಿಸುವುದಾಗಿ ತಿಳಿಸಿದೆ. ಚುನಾಯಿತ ಪ್ರತಿನಿಧಿಗಳು ಕೆಂಪು ದೀಪದ ಕಾರು ಬಳಸುವುದಿಲ್ಲ, ವಾಸಕ್ಕೆ ದುಬಾರಿ ಸರ್ಕಾರಿ ಬಂಗಲೆ ನೀಡುವುದಿಲ್ಲ, ಭಾರೀ ಪ್ರಮಾಣದ ಪೊಲೀಸ್ ರಕ್ಷಣೆ ಸಿಗುವುದಿಲ್ಲ.
ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ಕೊಡಿಸುವುದರ ಪರವಾಗಿ ಬಿಜೆಪಿ ಮೊದಲಿನಿಂದಲೂ ವಾದ ಮಂಡಿಸುತ್ತಿತ್ತು. ಆದರೆ, ಈ ಬಾರಿ ಸುಮ್ಮನುಳಿದಿದೆ.
2) ಮಹಿಳಾ ಸುರಕ್ಷೆ
ಗ್ಯಾಂಗ್ ರೇಪ್‌ಗಳಿಗೆ ಹೆಸರಾದ ನವದೆಹಲಿಯಲ್ಲಿ ಮಹಿಳಾ ಸುರಕ್ಷೆಗೆ ಬಿಜೆಪಿ ಹಾಗೂ ಎಎಪಿ ಎರಡೂ ಪ್ರಾಮುಖ್ಯತೆ ನೀಡಿವೆ. ಪ್ರತಿ ಜಿಲ್ಲೆಯಲ್ಲಿಯೂ ವಿಶೇಷ ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸುವುದು, ಮುಖ್ಯಮಂತ್ರಿ ಕಚೇರಿಯಲ್ಲಿ ಮಹಿಳೆಯರ ಸಮಸ್ಯೆ ಆಲಿಸಲು ವಿಶೇಷ ಸಹಾಯವಾಣಿ ವ್ಯವಸ್ಥೆ ಮಾಡುವುದಾಗಿ ಬಿಜೆಪಿ ಭರವಸೆ ನೀಡಿದೆ.
ನಿರ್ಭಯಾ ಪ್ರಕರಣದ ನಂತರ ಮಹಿಳಾ ಸುರಕ್ಷತೆಗಾಗಿ ಜಸ್ಟೀಸ್ ವರ್ಮಾ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಜಾರಿಗೆ ತರುವುದಾಗಿ ಆಮ್ ಆದ್ಮಿ ಭರವಸೆ ನೀಡಿದೆ. ಸರಿಯಾದ ಬೀದಿ ದೀಪ ಹಾಗೂ ಸಿಸಿಟಿವಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. [ಆಮ್ ಆದ್ಮಿಯಿಂದ 70 ಅಂಶಗಳ ಪ್ರಣಾಳಿಕೆ]
3) ವಿದ್ಯುತ್
ಎರಡೂ ಪಕ್ಷಗಳೂ ವಿದ್ಯುತ್ ದರ ಇಳಿಸುವ ಭರವಸೆ ನೀಡಿವೆ. ಆಪ್ ಒಂದು ಹೆಜ್ಜೆ ಮುಂದೆ ಹೋಗಿ ಅರ್ಧದಷ್ಟು ಕಡಿತಗೊಳಿಸುವುದಾಗಿ ತಿಳಿಸಿವೆ. ವಿದ್ಯುತ್ ಕಂಪನಿಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ತರುವುದಾಗಿ ಬಿಜೆಪಿ ತಿಳಿಸಿದ್ದರೆ, ಕಂಪನಿಗಳ ಆಡಿಟ್ ನಡೆಸುವುದು ಮತ್ತು DISCOMs ಜೊತೆ ಸ್ಪರ್ಧೆ ಗಿಳಿಸುವುದು ಆಪ್ ಭರವಸೆ. ದೆಹಲಿಯನ್ನು ಸೋಲಾರ್ ನಗರವಾಗಿಸುವ ಕನಸು ಇಬ್ಬರಲ್ಲೂ ಇದೆ.
4) ನೀರು
ಸ್ವಚ್ಛ ಹಾಗೂ ಸುಲಭ ನೀರು ಲಭ್ಯತೆಯ ಭರವಸೆ ಎರಡೂ ಪಕ್ಷಗಳದ್ದು. ಯಮುನಾ ನದಿ ಸ್ವಚ್ಛಗೊಳಿಸುವುದು ಮತ್ತು ಹರ್ಯಾಣದ ಮುನಾಕ್ ಕಾಲುವೆಯಿಂದ ನೀರು ತರುವುದು ಇಬ್ಬರ ಅಭಿವೃದ್ಧಿ ಪಟ್ಟಿಯಲ್ಲೂ ಇವೆ. ನೀರು ಮಾಫಿಯಾ ತಡೆಗಟ್ಟುವುದು, ಜಲಮಂಡಳಿಯ ಪರಿಶೀಲನೆ ಹಾಗೂ ಮಳೆ ನೀರು ಕೊಯ್ಲು ಕುರಿತು ಇಬ್ಬರೂ ಭರವಸೆ ನೀಡಿದ್ದಾರೆ.
5) ಮನೆ
ಸ್ಲಂ ಪ್ರದೇಶದಲ್ಲಿ ಬಹು ಹಂತದ ಮನೆಗಳ ನಿರ್ಮಿಸಿ, ಉಚಿತ ನೀರು, ಸಹಾಯಧನ ಸಹಿತ ವಿದ್ಯುತ್, ಒಂದು ಗ್ಯಾಸ್ ಸಂಪರ್ಕ ಹಾಗೂ ಸರಿಯಾದ ಶೌಚಾಲಯ ನಿರ್ಮಿಸುವುದು ಬಿಜೆಪಿ ಕಟ್ಟಿಕೊಟ್ಟಿರುವ ಕನಸು. ಆಪ್ ಕೂಡ ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸುವುದು ಹಾಗೂ ಸ್ಲಂ ನಿವಾಸಿಗಳಿಗೆ ಸ್ವಚ್ಛ ಪರಿಸರದ ಫ್ಲಾಟ್ ಅಥವಾ ಭೂಮಿ ನೀಡುವುದು ಆಪ್ ಬಿತ್ತಿರುವ ಕನಸು.












Click it and Unblock the Notifications