ತಮಿಳುನಾಡಿಗೆ 26 ಟಿಎಂಸಿ ನೀರು ಬಿಡಬೇಕು

ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಅಲೋಕ್ ರಾವತ್ ನೇತೃತ್ವದಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಿತು. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡು ಮುಖ್ಯ ಕಾರ್ಯದರ್ಶಿ ಶೀಲಾ ಬಾಲಕೃಷ್ಣನ್, ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಿನ ಪಾಲಿನ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶ ನೀಡಬೇಕೆಂದು ಬೇಡಿಕೆ ಇಟ್ಟರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕ ವರ್ಷವೊಂದಕ್ಕೆ 192 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕಿತ್ತು. ಆದರೆ, ಈ ವರ್ಷ 214 ಟಿಎಂಸಿ ನೀರು ತಮಿಳುನಾಡಿಗೆ ಹರಿಸಲಾಗಿದೆ ಎಂದರು.
ವಾದ-ಪ್ರತಿವಾದ ಆಲಿಸಿದ ಸಮಿತಿ, ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಂತೆ ಸಾಮಾನ್ಯ ಜಲ ವರ್ಷದಲ್ಲಿ ಕರ್ನಾಟಕ ನವೆಂಬರ್ ತಿಂಗಳಲ್ಲಿ 15 ಟಿಎಂಸಿ, ಡಿಸೆಂಬರ್‌ನಲ್ಲಿ 8 ಟಿಎಂಸಿ ಮತ್ತು ಜನವರಿಯಲ್ಲಿ 3 ಟಿಎಂಸಿ ನೀರನ್ನು ತಮಿಳುನಾಡಿಗೆ ನೀಡಬೇಕು. ಅದರನ್ವಯ ಮುಂದಿನ ಮೂರು ತಿಂಗಳ ಅವಧಿಯಲ್ಲಿ 26 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಿತು.
ನೀರಾವರಿ ಯೋಜನೆಗಳಿಗೂ ಕಿರಿಕ್ : ಸಭೆಯಲ್ಲಿ ಕಾವೇರಿ ನಿಯಂತ್ರಣಾ ಮಂಡಳಿಯನ್ನು ತಕ್ಷಣ ರಚಿಸಬೇಕು ಮತ್ತು ಕಾವೇರಿ ಕಣಿವೆಯಲ್ಲಿ ಕರ್ನಾಟಕ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ತಮಿಳುನಾಡಿ ಸರ್ಕಾರ ಆಗ್ರಹಿಸಿತು. ಆದರೆ, ಸುಪ್ರೀಂ ಕೋರ್ಟ್ ರಚಿಸಿರುವ ಕಾವೇರಿ ನಿಗಾ ಸಮಿತಿ ವ್ಯಾಪ್ತಿಗೆ ತಮಿಳುನಾಡು ಪ್ರಸ್ತಾಪಿಸಿದ ಯಾವ ಅಂಶಗಳೂ ಬಾರದಿರುವುದರಿಂದ ಈ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿಲ್ಲ. (ಅರ್ಕಾವತಿ ಯೋಜನೆಗೂ ಜಯಲಲಿತಾ ಅಪಸ್ವರ)












Click it and Unblock the Notifications