ತಮಿಳುನಾಡು ವಿರುದ್ಧ ಸಂಸತ್ ಭವನದ ಮುಂದೆ ರಾಜ್ಯ ಸಂಸದರ ಧರಣಿ
ನವದೆಹಲಿ, ಡಿಸೆಂಬರ್ 27: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರದ ವಿರೋಧ ಖಂಡಿಸಿ ರಾಜ್ಯದ ಸಂಸದರು ಗುರುವಾರ ಸಂಸತ್ ಭವನದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಧರಣಿ ನಡೆಸಿದರು.
ಸಂಸತ್ ಭವನದ ಮುಂದೆ ಬೆಳಿಗ್ಗೆ ಸೇರಿಕೊಂಡ ರಾಜ್ಯದ ಎಲ್ಲ ಪಕ್ಷಗಳ ಸಂಸದರು ಮಹತ್ವದ ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದು ಕರ್ನಾಟಕಕ್ಕೆ ಸಂಬಂಧಿಸಿದ ಯೋಜನೆ ಮಾತ್ರವಲ್ಲ. ಇದರಿಂದ ತಮಿಳುನಾಡಿನ ರೈತರಿಗೂ ಅನುಕೂಲವಾಗಲಿದೆ. ಅದನ್ನು ಮರೆತು ತಮಿಳುನಾಡು ವಿನಾಕಾರಣ ತಕರಾರು ತೆಗೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಚರ್ಚೆ ಬಯಸಿದೆಯೇ ಹೊರತು ಅಡ್ಡಿಪಡಿಸುವುದನ್ನಲ್ಲ. ಮೇಕೆದಾಟು ಯೋಜನೆಗೆ ಸಹಕಾರ ನೀಡಿ ಸುಪ್ರೀಂಕೋರ್ಟ್ ತೀರ್ಪು ಗೌರವಿಸಿ ಎಂದು ತಮಿಳುನಾಡಿಗೆ ಕುಟುಕಿದರು.
ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ತಮಿಳುನಾಡು ನಿರಂತರವಾಗಿ ಅಡ್ಡಿಪಡಿಸುತ್ತಿದೆ. ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಅನುಮತಿ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು, ಯೋಜನೆಗೆ ತಡೆ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿತ್ತು. ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸದನದಲ್ಲಿ ಪ್ರತಿಭಟನೆ ನಡೆಸಿತ್ತು.
ಬುಧವಾರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮೇಕೆದಾಟು ಯೋಜನೆಯ ಪ್ರಯೋಜನಗಳ ಬಗ್ಗೆ ವಿವರಿಸಿದ್ದರು. ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೆ ಲಾಭವಾಗಲಿದೆ. ಅದರಲ್ಲಿಯೂ ತಮಿಳುನಾಡಿಗೇ ಅಧಿಕ ಲಾಭ ಎಂದು ಮನವರಿಕೆ ಮಾಡಿಕೊಟ್ಟಿದ್ದರು.

ಎಲ್ಲ ಪಕ್ಷಗಳ ಸದಸ್ಯರೂ ಪಕ್ಷಾತೀತವಾಗಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸಹ ರಾಜ್ಯದ ಸಂಸದರಿಗೆ ಸಾತ್ ನೀಡಿದರು.












Click it and Unblock the Notifications