Breaking: ಸಿದ್ದಿಕ್ ಕಪ್ಪನ್ ಜಾಮೀನು; ಯುಪಿ ಸರಕಾರಕ್ಕೆ ಸುಪ್ರೀಂ ನೋಟಿಸ್
ನವದೆಹಲಿ, ಆಗಸ್ಟ್ 29: 2020ರಿಂದ ಬಂಧನದಲ್ಲಿರುವ ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ಜಾಮೀನು ಅರ್ಜಿಯ ಕುರಿತು ಸುಪ್ರೀಂ ಕೋರ್ಟ್, ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
2020ರ ಅಕ್ಟೋಬರ್‌ನಲ್ಲಿ ದಲಿತ ಯುವತಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದಾಗ ಬಂಧಿತರಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ಜಾಮೀನು ಅರ್ಜಿಯ ಕುರಿತು ಉತ್ತರ ಪ್ರದೇಶ ಸರಕಾರದಿಂದ ಸುಪ್ರೀಂ ಕೋರ್ಟ್ ಸೋಮವಾರ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠವು ಸೆಪ್ಟೆಂಬರ್ 9 ಕ್ಕೆ ಪ್ರಕರಣದ ವಿಚಾರನೆಯನ್ನು ಮುಂದೂಡಿದೆ.

ಆಪಾದಿತ ಹತ್ರಾಸ್ ಪಿತೂರಿ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ದಾಖಲಾಗಿರುವ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಈ ತಿಂಗಳ ಆರಂಭದಲ್ಲಿ ತಿರಸ್ಕರಿಸಿತ್ತು.
ಸಿದ್ದಿಕ್ ಕಪ್ಪನ್, ಮಲಯಾಳಂ ಸುದ್ದಿ ಪೊರ್ಟಲ್‍ನ ವರದಿಗಾರರಾಗಿದ್ದರು. 2020 ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ಅವರು ಹತ್ರಾಸ್‌ಗೆ ತೆರಳುತ್ತಿದ್ದರು. ಸಿದ್ದಿಕ್ ಸೇರಿದಂತೆ ಮೂವರನ್ನು ದಾರಿ ಮಧ್ಯದಲ್ಲೆ ಪೊಲೀಸರು ಬಂಧಿಸಿದ್ದರು.
ಬಂಧಿತ ಪತ್ರಕರ್ತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಸೆಕ್ಷನ್ 124 ಎ (ದೇಶದ್ರೋಹ), ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಸೆಕ್ಷನ್ 17 ಮತ್ತು 18 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಯಿತು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 65, 72 ಮತ್ತು 75 ರ ಧಾರ್ಮಿಕ ಭಾವನೆಗಳ ಕದಡುವ ಹುನ್ನಾರವನ್ನು ಸೇರಿಸಲಾಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಯುಎಪಿಎಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಹಿಂದೆ ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಗಳಿಗೆ ಧನಸಹಾಯ ಮಾಡಿದ ಆರೋಪ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲಿದೆ.
2020 ಸೆಪ್ಟೆಂಬರ್ 14ರಂದು ಯುವತಿ ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಹೊಲಕ್ಕೆ ತೆರಳಿದ್ದಳು. ಈ ವೇಳೆ ನಾಲ್ವರು ಮೇಲ್ಜಾತಿಯ ಕಾಮುಕರು ಯುವತಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಅಷ್ಟೇ ಅಲ್ಲದೆ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನುಮೂಳೆಯನ್ನು ಮುರಿದು ಗಂಭೀರವಾಗಿ ಗಾಯಗೊಳಿಸಿದ್ದರು. ಬಳಿಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಆಕೆ ಬದುಕುಳಿಯಲಿಲ್ಲ. ಈ ಘಟನೆಯನ್ನು ಮುಚ್ಚಿ ಹಾಕಲು ಇಡೀ ವ್ಯವಸ್ಥೆ ಪ್ರಯತ್ನಿಸಿದೆ ಎಂಬ ಗಂಭಿರ ಆರೋಪಗಳು ಬಂದಿದ್ದವು.
ಇದನ್ನು ವರದಿ ಮಾಡಲು ಪತ್ರಕರ್ತ ಸಿದ್ದಿಕ್ ಕಪ್ಪನ್ ಮತ್ತು ಮೂವರು ಹತ್ರಾಸ್‌ಗೆ ತೆರಳುತ್ತಿದ್ದರು. ಆರೋಪಿಯು ಹತ್ರಾಸ್‌ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸುತ್ತಿದ್ದ ಎಂದು ಪೊಲೀಸರು ಈ ಹಿಂದೆ ಹೇಳಿಕೊಂಡಿದ್ದರು.












Click it and Unblock the Notifications