ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಉತ್ತರಿಸುತ್ತೇವೆ, ಸವಾಲೆಸೆದ ಭಾರತ
ನವದೆಹಲಿ, ಆಗಸ್ಟ್ 21: ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವುದಾಗಿ ಘೋಷಿಸಿರುವ ಪಾಕಿಸ್ತಾನಕ್ಕೆ ಭಾರತ ಪ್ರತಿಕ್ರಿಯೆ ನೀಡಿದ್ದು, 'ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಉತ್ತರಿಸುತ್ತೇವೆ' ಎಂದಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಸಯ್ಯದ್ ಅಕ್ಬರುದ್ದಿನ್ ಪಾಕಿಸ್ತಾನದ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಪಾಕಿಸ್ತಾನ ಯಾವ ಹಾದಿಯಲ್ಲಿ ಹೋದರೂ, ಆವು ಅದಕ್ಕೆ ಅದೇ ಹಾದಿಯಲ್ಲಿ ಉತ್ತರ ನೀಡುತ್ತೇವೆ" ಎಂದು ಸವಾಲೆಸೆದರು.
"ಇತ್ತೀಚೆಗಷ್ಟೇ ಕುಲಭೂಷಣ್ ಯಾದವ್ ಅವರಿಗೆ ಮರಣದಂಡನೆ ವಿಧಿಸಿದ್ದ ಪಾಕಿಸ್ತಾನದ ನಡೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆಯೊಡ್ಡುವ ಮೂಲಕ ನೆರೆಯ ದೇಶಕ್ಕೆ ಮುಖಭಂಗವನ್ನುಂಟು ಮಾಡಿತ್ತು. ಅದಾಗಿ ತಿಂಗಳಲ್ಲಿ ಮತ್ತೊಂದು ಸಮಸ್ಯೆಯನ್ನಿಟ್ಟುಕೊಂಡು ಪಾಕಿಸ್ತಾನ ವಿಶ್ವ ನ್ಯಾಯಾಲಯದ ಮೊರೆಹೋಗಿದೆ" ಎಂದು ಅಕ್ಬರುದ್ದಿನ್ ಲೇವಡಿ ಮಾಡಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ಕ್ರಮವನ್ನು ವಿರೋಧಿಸಿದ್ದ ಪಾಕಿಸ್ತಾನ ಇತ್ತೀಚೆಗಷ್ಟೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲೂ ಮುಖಭಂಗ ಅನುಭವಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಚ್ಚಿದ ಬಾಗಿಲ ಸಭೆಯಲ್ಲಿ ಚೀನಾವನ್ನು ಹೊರತುಪಡಿಸಿ ಯಾವ ದೇಶಗಳೂ ಪಾಕಿಸ್ತಾನವನ್ನು ಬೆಂಬಲಿಸಿಲ್ಲ. ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದ್ದು, ಅದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಭಾರತ ಸರ್ಕಾರಕ್ಕಿದೆ. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಹೇಳುವ ಅಧಿಕಾರ ಪಾಕಿಸ್ತಾನಕ್ಕಿಲ್ಲ ಎಂದು ಈಗಾಗಲೇ ಭಾರತ ಪಾಕಿಸ್ತಾನಕ್ಕೆ ಉತ್ತರ ನೀಡಿದೆ.
ಆದರೆ ಪಟ್ಟು ಬಿಡದ ಪಾಕಿಸ್ತಾನ ಯಾವೆಲ್ಲ ಪ್ರಯತ್ನವನ್ನು ಮಾಡಬಹುದೋ ಆ ಎಲ್ಲಕ್ಕೂ ಸಿದ್ಧವಾಗಿದೆ. ಮಂಗಳವಾರ ತಾನು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗುವುದಾಗಿ ಪಾಕಿಸ್ತಾನ ಘೋಷಿಸಿದೆ.
ಆದರೆ ಭಾರತ ಈಗಾಗಲೇ ವಿಶ್ವದ ಬಹುತೇಕ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದು, ಇದು ಭಾರತಕ್ಕೆ ಭವಿಷ್ಯದಲ್ಲಿ ನೆರವಾಗಲಿದೆ. ವಿಶ್ವ ಭಾರತದ ಪರ ಇದೆ ಎಂಬ ನಂಬಿಕೆ ನಮಗಿದೆ ಎಂದು ಸಯ್ಯದ್ ಅಕ್ಬರುದ್ದಿನ್ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications