ನಿರ್ಭಯ ಪ್ರಕರಣದ ಅಪರಾಧಿಗಳು ಜೈಲಿನಲ್ಲಿ ಸಂಪಾದಿಸಿದ್ದೆಷ್ಟು?
ನವದೆಹಲಿ, ಜನವರಿ 15 : ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ದಿನಗಣನೆ ಆರಂಭವಾಗಿದೆ. ಜನವರಿ 22ರಂದು ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲು ಸಿದ್ಧತೆಗಳು ನಡೆಯುತ್ತಿವೆ.
ದೆಹಲಿಯ ತಿಹಾರ್ ಜೈಲಿನಲ್ಲಿ ಎಲ್ಲಾ ಅಪರಾಧಿಗಳು ಇದ್ದಾರೆ. ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದಾರೆ. ಇಬ್ಬರು ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳಿದ್ದರು. ಒಬ್ಬ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಇನ್ನೊಬ್ಬ ಬಾಲಾಪರಾಧಿ ಎಂಬ ಕಾರಣಕ್ಕೆ ಬಿಡುಗಡೆಗೊಂಡಿದ್ದಾನೆ. ನಾಲ್ವರು ಅಪರಾಧಿಗಳ ಆರೋಪ ಸಾಬೀತಾಗಿದ್ದು, ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31) ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಪಟಿಯಾಲಾ ಹೌಸ್ ಕೋರ್ಟ್ ಎಲ್ಲಾ ಅಪರಾಧಿಗಳಿಗೆ ಡೆತ್ ವಾರೆಂಟ್ ಜಾರಿಗೊಳಿಸಿದೆ.

ಜೈಲಿನಲ್ಲಿ 1 ಲಕ್ಷ ರೂ. ದುಡಿದರು
ಮುಕೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್ ದೆಹಲಿಯ ತಿಹಾರ್ ಜೈಲಿನಲ್ಲಿ 1,37,000 ರೂ. ಸಂಪಾದನೆ ಮಾಡಿದ್ದಾರೆ. ಜನವರಿ 22ರಂದು ನಾಲ್ವರಿಗೂ ಗಲ್ಲು ಶಿಕ್ಷೆ ಜಾರಿಗೊಳಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಯಾರು ಎಷ್ಟು ದುಡಿದರು?
ಜೈಲು ವಾಸದ ಸಂದರ್ಭದಲ್ಲಿ ಕೆಲಸ ಮಾಡುವುದು ಕಡ್ಡಾಯ. ಆದರೆ, ಮುಕೇಶ್ ಸಿಂಗ್ ಕೂಲಿ ಕೆಲಸವನ್ನು ಮಾಡಿಲ್ಲ. ಅಕ್ಷಯ್ ಕುಮಾರ್ ಸಿಂಗ್ 69 ಸಾವಿರ, ಪವನ್ 29 ಸಾವಿರ ಮತ್ತು ವಿನಯ್ 39 ಸಾವಿರ ರೂ. ಹಣವನ್ನು ಸಂಪಾದನೆ ಮಾಡಿದ್ದಾರೆ.

ಪರೀಕ್ಷೆ ಕಟ್ಟಿದ್ದರು
2012ರಲ್ಲಿ ಎಲ್ಲರ ಬಂಧನವಾಗಿತ್ತು. 2016ರಲ್ಲಿ ಮುಕೇಶ್, ಪವನ್ ಮತ್ತು ಅಕ್ಷಯ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಟ್ಟಿದ್ದರು. ಆದರೆ, ಪಾಸ್ ಆಗಲಿಲ್ಲ. ವಿನಯ್ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದರೂ ಅದನ್ನು ಪೂರ್ಣಗೊಳಿಸಲಿಲ್ಲ.

ಜೈಲಿನ ನಿಯಮ ಉಲ್ಲಂಘನೆ
ನಾಲ್ವರು ಅಪರಾಧಿಗಳು ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಶಿಕ್ಷೆಗೆ ಗುರಿಯಾಗಿದ್ದರು. ವಿನಯ್ 11 ಬಾರಿ ಶಿಕ್ಷೆಗೆ ಗುರಿಯಾಗಿದ್ದ. ಮುಕೇಶ್ ಮತ್ತು ಪವನ್ ಮೂರು ಬಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು.












Click it and Unblock the Notifications