ದೆಹಲಿಯಾದ್ಯಂತ ಸ್ಫೋಟಕ್ಕೆ ಸಂಚು: ಐಇಡಿಗಳು ಪತ್ತೆ
ನವದೆಹಲಿ, ಫೆಬ್ರವರಿ 18: ದೆಹಲಿಯಾದ್ಯಂತ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಸೀಮಾಪುರಿಯಲ್ಲಿ ಕಳೆದ ತಿಂಗಳು ಐಇಡಿ ಸ್ಫೋಟಕಗಳು ಪತ್ತೆಯಾಗಿದ್ದವು, ಈ ಸ್ಫೋಟಕಗಳನ್ನು ನಗರಾದ್ಯಂತ ಇಟ್ಟು ಸ್ಫೋಟಿಸಲು ಉದ್ದೇಶಿಸಲಾಗಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸೀಮಾಪುರಿಯ ಮನೆಯೊಂದರಲ್ಲಿ 2.5 ರಿಂದ 3 ಕೆಜಿಯಷ್ಟು ತೂಕದ ಐಇಡಿಯನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಮನೆಯ ಮಾಲೀಕ ಮತ್ತು ಆಸ್ತಿ ವ್ಯವಹಾರ ನಡೆಸುವ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

ಸ್ಥಳೀಯರ ಸಹಾಯವಿಲ್ಲದೆ ಅಂತಹ ಕೆಲಸಗಳು ನಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯ ಈಶಾನ್ಯ ಭಾಗದ ಸೀಮಾಪುರಿಯಲ್ಲಿ ಐಇಡಿ ಇದ್ದ ಬ್ಯಾಗ್ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಹೆಚ್ಚಳ ಮಾಡಿದ್ದಾರೆ. ಹಾಗೆಯೇ ಆ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಐಇಡಿ ಪತ್ತೆಯಾಗಿದ್ದ ಮನೆಯ ಸಮೀಪದ ಕಟ್ಟಡಗಳಲ್ಲಿ ಇದ್ದ ಸುಮಾರು 400 ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಆ ಮನೆಯನ್ನು ಸೀಲ್ ಮಾಡಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.
ವಿಶೇಷ ತಂಡವು ಪ್ರಕರಣದ ತನಿಖೆ ಕೈಗೊಂಡಿದ್ದು, ಸ್ಥಳೀಯರು ಹಾಗೂ ವಿದೇಶಿ ಜಾಲದ ಕೈವಾಡ ಇರುವ ಕುರಿತು ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆದಿದೆ ಎಂದು ರಾಕೇಶ್ ಅಸ್ಥಾನ ಹೇಳಿದ್ದಾರೆ.
ಎರಡು ಸ್ಥಳಗಳಲ್ಲಿ ಪತ್ತೆಯಾಗಿರುವ ಸ್ಫೋಟಕಗಳನ್ನು ಸಿದ್ಧಪಡಿಸಿರುವುದು ಒಂದೇ ತಂಡ ಎಂದು ವಿಶ್ಲೇಷಿಸಲಾಗಿದೆ, ಎನ್‌ಎಸ್‌ಜಿ ಮೂಲಗಳ ಪ್ರಕಾರ, ಸ್ಫೋಟಕ ಸಾಧನಗಳಲ್ಲಿ ಅಮೋನಿಯಂ ನೈಟ್ರೇಟ್ ಮತ್ತು ಆರ್‌ಡಿಎಕ್ಸ್ ಮಿಶ್ರಣವಿತ್ತು ಎಂದು ವರದಿಯಾಗಿದೆ.
ಕಟ್ಟಡದ ಮಾಲೀಕ ಬಾಡಿಗೆಗೆ ನೀಡಿದ್ದ ಮನೆಯಲ್ಲಿ ಐಇಡಿ ತುಂಬಿದ್ದ ಬ್ಯಾಗ್ ಪತ್ತೆಯಾಗಿದೆ, ಕೆಲವು ತಿಂಗಳ ಹಿಂದೆ ಬಾಡಿಗೆಗೆ ನೀಡಿದ್ದ ಮನೆಯಲ್ಲಿ ಇಬ್ಬರು ವಾಸಿಸುತ್ತಿದ್ದರು ಎಂದು ಮನೆಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.












Click it and Unblock the Notifications