ಆಮ್ ಆದ್ಮಿ ಬ್ಯಾಂಕ್ ಖಾತೆ ಬಗ್ಗೆ ತನಿಖೆಗೆ ಆದೇಶ
ನವದೆಹಲಿ, ಅ, 23 : ನವದೆಹಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಮ್ ಆದ್ಮಿ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ. ಪಕ್ಷಕ್ಕೆ ಹರಿದು ಬಂದಿರುವ ಆದಾಯ ಮತ್ತು ಖಾತೆಯ ವಿವರಗಳ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು ಎಂದು ದೆಹಲಿ ಹೈಕೋರ್ಟ್ ಬುಧವಾರ ಆದೇಶ ನೀಡಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕಾನೂನು ಉಲ್ಲಂಘಿಸಿ, ಅಕ್ರಮವಾಗಿ ವಿದೇಶದಿಂದ ನಿಧಿ ಸಂಗ್ರಹ ಮಾಡುತ್ತಿದೆ, ಈ ಸಂಬಂಧ ತನಿಖೆ ಕೈಗೊಳ್ಳಬೇಕು ಎಂದು ವಕೀಲರಾದ ಎಂ.ಎಲ್ ಶರ್ಮಾ ಅವರು ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳಾದ ಪ್ರದೀಪ್ ನಂದರಾಜೋಗ್ ಮತ್ತು ವಿ.ಕೆ ರಾವ್ ಅವರ ದ್ವಿ ಸದಸ್ಯ ಪೀಠ, ಆಮ್ ಆದ್ಮಿ ಪಕ್ಷದ ಖಾತೆಯ ಬಗ್ಗೆ ತನಿಖೆ ನಡೆಸಿ, ಡಿಸೆಂಬರ್ 10ರೊಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಸರ್ಕಾರದ ತನಿಖೆ ವೇಳೆ ಪಕ್ಷದ ಖಾತೆಗೆ ಅಕ್ರಮವಾಗಿ ಹಣ ಬಂದಿರುವುದು ಸಾಬೀತಾದರೆ, ಪಕ್ಷದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಮತ್ತು ನ್ಯಾಯಾಲಯಕ್ಕೆ ಈ ಕುರಿತು ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆಮ್ ಆದ್ಮಿ ಪಕ್ಷ ಈಗಾಗಲೇ ಡಿ.4 ರಂದು ನಡೆಯುವ ವಿಧಾನಭೆ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದೆ. ಅರವಿಂದ್ ಕೇಜ್ರಿವಾಲ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ. ಸದ್ಯ ಪಕ್ಷದ ಬ್ಯಾಂಕ್ ಖಾತೆಯ ಕುರಿತು ತನಿಖೆ ನಡೆಸಲು ಸೂಚನೆ ನೀಡಿರುವುದು ಪಕ್ಷಕ್ಕೆ ಹೊಸ ಸಂಕಷ್ಟ ತಂದೊಡ್ಡಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸಮಾಜದ ವಿವಿಧ ಸ್ತರದಲ್ಲಿರುವ ವ್ಯಕ್ತಿಗಳಿಂದ ಪಕ್ಷಕ್ಕಾಗಿ ದೇಣಿಗೆ ಪಡೆದಿದ್ದು, ಅನಿವಾಸಿ ಭಾರತೀಯರು, ರಿಕ್ಷಾವಾಲಾಗಳು ಮತ್ತು ವ್ಯಾಪಾರಿಗಳಿಂದ 12 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ ಎಂದು ಸೆಪ್ಟೆಂಬರ್ ನಲ್ಲಿ ವರದಿಯಾಗಿತ್ತು. ಪಕ್ಷಕ್ಕೆ ಜನರು 10 ರು ನಿಂದ ಲಕ್ಷ ರು ತನಕ ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿತ್ತು. (ಸಾಮಾನ್ಯರ ಪಕ್ಷದಲ್ಲಿದೆ ಕೋಟಿಗಟ್ಟಲೆ ಫಂಡ್)
ಪಕ್ಷಕ್ಕೆ ಹರಿದು ಬಂದ ಹಣದಲ್ಲಿ 6.20 ಕೋಟಿ ರೂ. ಭಾರತೀಯರು ನೀಡಿದ ದೇಣಿಗೆ, ಉಳಿದಂತೆ ಅಮೆರಿಕ, ಹಾಂಕಾಂಗ್, ಕೆನಡಾ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್, ಅರಬ್ ಸಂಯುಕ್ತ ರಾಷ್ಟ್ರಗಳಿಂದ ದೇಣಿಗೆ ಬಂದಿರುವುದಾಗಿ ಆಮ್ ಆದ್ಮಿ ಪಕ್ಷ ಹೇಳಿಕೆ ನೀಡಿತ್ತು. ಇದರಿಂದಾಗಿ ವಕೀಲರಾದ ಎಂ.ಎಲ್ ಶರ್ಮಾ ಅವರು ಪಕ್ಷದ ಬ್ಯಾಂಕ್ ಖಾತೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications