ಒಂದು ಕಲ್ಲಿಗೆ ಎರಡು ಹಕ್ಕಿ: ಹರ್ಷವರ್ಧನ್ ದಿಲ್ಲಿ ಸಿಎಂ
ದೆಹಲಿ, ಮೇ 17: ರಾಷ್ಟ್ರಪತಿ ಆಡಳಿತದಲ್ಲಿರುವ, ಏಳೂ ಸಂಸದೀಯ ಸ್ಥಾನಗಳನ್ನು ಬಿಜೆಪಿ ಮಡಿಲಿಗೆ ಹಾಕಿರುವ ನಮ್ಮಗಳ ಮುಂದಿನ ಕಥೆಯೇನು ಎಂದು ದಿಲ್ಲಿಯ ಜನ ಕೇಳುತ್ತಿದ್ದಾರೆ.
ಸ್ವಯಂಕೃತಾಪರಾಧದಿಂದ ಅಂಧಃಪತನ ಕಂಡ ಆಮ್ ಆದ್ಮಿ:
ಅದಕ್ಕೂ ಮುನ್ನ, ಬೆಳ್ಳಿತಟ್ಟೆಯಲ್ಲಿಟ್ಟುಕೊಟ್ಟಿದ್ದ ಮುಖ್ಯಮಂತ್ರಿ ಸ್ಥಾನವನ್ನು ಕಿಂಚಿತ್ತೂ ಗೌರವವಿಲ್ಲದೆ, ಮಕ್ಕಳಾದಂತೆ ಒದ್ದುಬಂದಿದ್ದ ಆಮ್ ಆದ್ಮಿ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯ ಮತದಾರ ಪ್ರಭುಗಳು ಹೇಳಹೆಸರಿಲ್ಲದಂತೆ ಗುಡಿಸಿಹಾಕಿದ್ದಾರೆ. ಜತೆಗೆ, ದಿಲ್ಲಿಯಷ್ಟೇ ಪುರಾತನವಾದ ಕಾಂಗ್ರೆಸ್ ಪಕ್ಷವು ಬೋರ್ಡಿಗೇ ಇಲ್ಲದಂತಾಗಿದೆ. (ದಿಲ್ಲಿಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾದರೆ ಮುಂದೇನು?)
ಹಾಗಾಗಿ ದಿಲ್ಲಿಯಲ್ಲಿ ಮುಂದಿನ ಆಡಳಿತ ಯಾರಿಗೆ ಸಲ್ಲುತ್ತದೆ? ಮುಖ್ಯಮಂತ್ರಿ ಯಾರಾಗಲಿದ್ದಾರೆ? ಎಂಬ ಕುತೂಹಲ ಗರಿಗೆದರಿದೆ. ಕಳೆದ ಬಾರಿ 6 ತಿಂಗಳ ಹಿಂದೆ ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆದಾಗ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪರಿಗಣಿತರಾಗಿದ್ದ ಡಾ. ಹರ್ಷವರ್ಧನ್ ಅವರು ಈ ಬಾರಿ ಚಾಂದಿನಿ ಚೌಕ್ ಲೋಕಸಭಾ ಕ್ಷೇತ್ರದಿಂದ ಜಯಶಾಲಿಯಾಗಿ ಸಂಸತ್ತಿಗೆ ಹೊರಟಿದ್ದಾರೆ.

ಆದರೆ ದಿಲ್ಲಿ ಮಟ್ಟಿಗೆ ಮುಂದಿನ ಆಟ ಇಲ್ಲಿಂದಲೇ ಇರುವುದು. ಅಂದರೆ ಲೋಕಸಭೆ ಚುನಾವಣೆಯಲ್ಲಿ ಏಳೂ ಸ್ಥಾನಗಳನ್ನು ಬಾಚಿಕೊಂಡು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಬಿಜೆಪಿ ಇದೀಗ ದಿಲ್ಲಿ ವಿಧಾನಸಭೆಯನ್ನೂ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಆಲೋಚಿಸುತ್ತಿದೆ. ಆ ಪ್ರಯತ್ನಾರ್ಥವಾಗಿ, ಡಾ. ಹರ್ಷವರ್ಧನ್ ಸಂಸತ್ತಿಗೆ ಬರುವುದಕ್ಕೆ ಮೋದಿ ತಡೆಯೊಟ್ಟಿದ್ದಾರೆ ಎಂದು ದಿಲ್ಲಿ ಬಿಜೆಪಿ ಮೂಲಗಳು ಪಿಸುಗುಟ್ಟುತ್ತಿವೆ.
ಒಂದೇ ಕಲ್ಲಿಗೆ ಎರಡು ಹಕ್ಕಿ: (ಅತೃಪ್ತ ವಿಜಯ್ ಮೇಲ್ಮನೆಗೆ; ಹರ್ಷವರ್ಧನ್ ಸಿಎಂ ಅಭ್ಯರ್ಥಿ)
ಅಂದರೆ ಸಂಸತ್ತಿನಲ್ಲಿ ಬಿಜೆಪಿ ಸಂಸದರುಗಳು ಈಗಾಗಲೇ ತುಂಬಿತುಳುಕುತ್ತಿದ್ದಾರೆ. ಹಾಗಾಗಿ ಒಬ್ಬ ಹರ್ಷವರ್ಧನ್ ರಾಜೀನಾಮೆ ನೀಡಿದರೆ ತೊಂದರೆಯೇನೂ ಆಗದು ಎಂದು ಅವರಿಂದ ತಕ್ಷಣಕ್ಕೆ ರಾಜೀನಾಮೆ ಕೊಡಿಸುವುದು ಮತ್ತು ಅವರ ಬದಲಿಗೆ ಹರ್ಷವರ್ಧನ್ ಗೆದ್ದುಬಂದಿರುವ ಚಾಂದಿನಿ ಚೌಕ್ ಕ್ಷೇತ್ರದಿಂದ ಅರುಣ್ ಜೇಟ್ಲಿ ಅವರನ್ನು ಕಣಕ್ಕಿಳಿಸುವುದು ಬಿಜೆಪಿಯ ಸದ್ಯದ ಎಣಿಕೆಯಾಗಿದೆ.
ಅಂದರೆ ಮುಂದೆ ಕೇಂದ್ರ ಸಚಿವರಾಗಬಲ್ಲ ವ್ಯಕ್ತಿ ಎಂದು ಬಿಂಬಿಸಿ ಅರುಣ್ ಜೇಟ್ಲಿ ಅವರನ್ನು ಚಾಂದಿನಿ ಚೌಕ್ ಕ್ಷೇತ್ರದಿಂದ ಸಂಸತ್ತಿಗೆ ಆರಿಸಿ ಕಳುಹಿಸುವುದು. ಮತ್ತು ಡಾ. ಹರ್ಷವರ್ಧನ್ ಎಂಬ ಸಜ್ಜನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿ ದಿಲ್ಲಿ ಅಸೆಂಬ್ಲಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವುದು ಬಿಜೆಪಿಯ ಎಣಿಕೆಯಾಗಿದೆ. ಅದ್ಸರಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ದಿಲ್ಲಿ ಅಸೆಂಬ್ಲಿ ಚುನಾವಣೆಗೆ ಯಾವಾಗ ತಥಾಸ್ತು ಅನ್ನುತ್ತಾರೆ? (ದಿಲ್ಲಿ ಸರಕಾರ ರಚನೆಗೆ ನಾ ಒಲ್ಲೆ ಎಂದ ಬಿಜೆಪಿ)












Click it and Unblock the Notifications