ರಿಕ್ಷಾ ಚಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ 'ಕಾಮುಕಿ' ಸೆರೆ
ನವದೆಹಲಿ, ಜುಲೈ 17 : ಇತ್ತೀಚೆಗೆ ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆಯ ನಿರ್ವಾಹಕರೊಬ್ಬರಿಗೆ ವಿದೇಶಿ ಮಹಿಳೆಯರು ಸಕತ್ತಾಗಿ ಚೆಚ್ಚಿದ್ದನ್ನು ನೋಡಿರಬಹುದು, ಓದಿರಬಹುದು. ರಾಜಧಾನಿ ದೆಹಲಿಯಲ್ಲಿ ಆಟೋರಿಕ್ಷಾ ಚಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಘಟನೆ ದೇಶದೆಲ್ಲೆಡೆ ಹಲವರ ಹುಬ್ಬೇರುವಂತೆ ಮಾಡಿತ್ತು.
ಆಟೋರಿಕ್ಷಾ ಚಾಲಕನನ್ನು ಕಾಮಕ್ಕೆ ಆಹ್ವಾನಿಸಿ ಪೀಡಿಸಿ, ಹಿಂಸಿಸಿದ 32 ವರ್ಷದ ಮಹಿಳೆಯನ್ನು ಸಫ್ದರ್ಜಂಗ್ ಎನ್ ಕ್ಲೇವ್ ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯವನ್ನು ಚಿತ್ರಿಸಲು ಯತ್ನಿಸಿದ ತಾಂಜಾನಿಯಾ ಮೂಲದ ಮತ್ತೊಬ್ಬ ಮಹಿಳೆ ಪರಾರಿಯಾಗಿದ್ದು, ಹುಡುಕಾಟ ಜಾರಿಯಲ್ಲಿದೆ ಎಂದು ಇನ್ಸ್ ಪೆಕ್ಟರ್ ವಿಷ್ಣುಧನಾದ್ ಝಾ ಹೇಳಿದ್ದಾರೆ.
ಮಧ್ಯಾಹ್ನ ನಡೆದ ಘಟನೆ: 41ವರ್ಷ ವಯಸ್ಸಿನ ಚಾಲಕ ಉಮೇಶ್ ಪ್ರಸಾದ್ ಅವರಿಗೆ ಬುಧವಾರ ಮಧ್ಯಾಹ್ನ ಯಾಕೋ ಟೈಂ ಚೆನ್ನಾಗಿರಲಿಲ್ಲ, ರೇಣು ಲಾಲ್ವಾನಿ ಎಂಬ ಮಹಿಳೆ ದಕ್ಷಿಣ ದೆಹಲಿಯ ಸಾಕೇತ್ ಬಳಿ ಆಟೋ ಹತ್ತಿದ್ದಾರೆ. ಅಲ್ಲಿಂದ ಸುಮಾರು 7 ಕಿ.ಮೀ ದೂರವಿರುವ ಅರ್ಜುನ್ ನಗರಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.

ಅರ್ಜುನ್ ನಗರದಲ್ಲಿದ್ದ ತನ್ನ ಅಪಾರ್ಟ್ಮೆಂಟ್ ಗೆ ತೆರಳುತ್ತಿದ್ದಂತೆ ಡ್ರೈವರ್ ಗೆ ಚಿಲ್ಲರೆ ನೀಡುವ ನೆಪದಲ್ಲಿ ಮನೆಗೆ ಕರೆಸಿಕೊಂಡಿದ್ದಾಳೆ. ಅನುಮಾನದಿಂದಲೇ ಮುಂಬಾಗಿಲು ದಾಟಿ ಮುಂದೆ ಬಂದ ಉಮೇಶ್ ಗೆ ಆ ಸಮಯಕ್ಕೆ ನೀರಿನ ದಾಹವಾಗಿದೆ. ನೀರು ಕೊಟ್ಟ ರೇಣು ತನ್ನ ಕಾಮದಾಹವನ್ನು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಉಮೇಶ್ ಗಾಬರಿಯಿಂದ ಆಕೆಯ ಆಫರ್ ನಿರಾಕರಿಸಿ ಹೊರಡಲು ಮುಂದಾಗಿದ್ದಾರೆ. ಅದರೆ, ಅಷ್ಟರಲ್ಲೇ ಬಾಗಿಲು ಮುಚ್ಚಿದ ರೇಣು, ಹೋಗಲಿ ಒಂದೆರಡು ನಿಮಿಷ ಕುಳಿತುಕೋ ಎಂದು ಹೇಳಿ ಮನೆಯೊಳಗೆ ಹೊರಟ್ಟಿದ್ದಾಳೆ.
ವೈನ್ ಬಾಟಲಿ ಹಿಡಿದು ಬಂದ ರೇಣು, ಉಮೇಶ್ ಗೆ ಕುಡಿಸಲು ಯತ್ನಿಸಿದ್ದಾಳೆ, ಕಾಮೋನ್ಮಾದದಿಂದ ಆತನ ಬಟ್ಟೆ ಹರಿದು, ಮುತ್ತಿಟ್ಟು ಹಿಂಸಿಸಿದ್ದಾಳೆ. ಈ ಸಮಯಕ್ಕೆ ಆಕೆಯ ರೂಮ್ ಮೇಟ್ ಎಲ್ಲವನ್ನು ಚಿತ್ರೀಕರಿಸಲು ಆರಂಭಿಸಿದ್ದಾಳೆ ಎಂದು ಉಮೇಶ್ ಅವರ ಹೇಳಿಕೆಯಿಂದ ತಿಳಿದು ಬಂದಿದೆ.
ಉಮೇಶ್ ತೋರುತ್ತಿದ್ದ ಪ್ರತಿರೋಧದಿಂದ ಬೇಸತ್ತ ಇಬ್ಬರು ಹೆಂಗಸರು ನಂತರ ರೂಮಿನೊಳಗೆ ಹೋಗಿ ಏನೋ ಚರ್ಚೆ ಆರಂಭಿಸಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡ ಉಮೇಶ್ ಮೊದಲ ಮಹಡಿಗೇರಿ ಅಲ್ಲಿಂದ ಕೆಳಕ್ಕೆ ಧುಮುಕಿದ್ದಾನೆ. ಇದರಿಂದ ಆತನ ಕಾಲು ಮುರಿದಿದೆ. ಈಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ಇನ್ಸ್ ಪೆಕ್ಟರ್ ವಿಷ್ಣು ವಿವರಿಸಿದ್ದಾರೆ.
ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ಮಹಿಳೆ ಹೆಸರು ಹಿತಿಜಾ ಎಂದು ತಿಳಿದು ಬಂದಿದೆ. ಆಕೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಲಾಲ್ವಾನಿ ಅವರನ್ನು ಬಂಧಿಸಲಾಗಿದೆ. ಆಕೆಯ ಮನೆಯಲ್ಲಿ ಆಟೋ ಡ್ರೈವರ್ ಗಳ ನಾಲ್ಕು ಡ್ರೈವಿಂಗ್ ಲೈಸನ್ಸ್ ಹಾಗೂ ಒಂದಷ್ಟು ಚಿತ್ರಗಳು ಸಿಕ್ಕಿವೆ. ಇದು ಬಹುದೊಡ್ಡ ಜಾಲ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇನ್ನೂ ಅನೇಕ ಆಟೋರಿಕ್ಷಾ ಚಾಲಕರು ಈ ಹೆಂಗಸರ ಕಾಮಚಟಕ್ಕೆ ಬಲಿಯಾಗಿರುವ ಶಂಕೆ ಇದೆ ಎಂದು ಇನ್ಸ್ ಪೆಕ್ಟರ್ ಹೇಳಿದರು.(ಐಎಎನ್ಎಸ್)












Click it and Unblock the Notifications