ದೆಹಲಿ ಮತದಾರರಿಗೆ ಸ್ಪೈಸ್ ಜೆಟ್ ಟಿಕೆಟ್ ದರದಲ್ಲಿ ರಿಯಾಯಿತಿ
ನವದೆಹಲಿ, ಫೆಬ್ರವರಿ 04: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಲು ಮುಂದಾಗುವ ಮತದಾರರಿಗೆ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಉಚಿತ ಪ್ರಯಾಣದ ಕೊಡುಗೆ ನೀಡುತ್ತಿದೆ. ಮೂಲ ಟಿಕೆಟ್ ದರವನ್ನು ತೆಗೆದು ಹಾಕಲಾಗಿದ್ದು, ನೂರಾರು ಮಂದಿಗೆ ದೆಹಲಿಯಲ್ಲಿ ಮತದಾನ ಮಾಡುವ ಅವಕಾಶ ಸಿಗಲಿದೆ.
ದೇಶದ ವಿವಿಧೆಡೆಯಿಂದ ದೆಹಲಿಗೆ ಮತದಾನ ಮಾಡಲು ಫೆಬ್ರವರಿ 8ರಂದು ತೆರಳುವವರಿಗೆ ಮೂಲ ಟಿಕೆಟ್ ದರವನ್ನು ತೆಗೆದು ಹಾಕಲಾಗಿದ್ದು, ತೆರಿಗೆ, ಸರ್ ಚಾರ್ಜ್ ಪಾವತಿಸಿ ಪ್ರಯಾಣಿಸಬಹುದಾಗಿದೆ ಎಂದು ಬಜೆಟ್ ವಿಮಾನಯಾನ ಸಂಸ್ಥೆ ಹೇಳಿದೆ.
ಈ ಕೊಡುಗೆಯನ್ನು ಪಡೆಯಲು ಇಚ್ಛಿಸುವ ಪ್ರಯಾಣಿಕರು, ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಸ್ಪೈಸ್ ಜೆಟ್ ಆಂತರಿಕ ಸಮಿತಿ ಪ್ರಯಾಣಿಕರನ್ನು ಆಯ್ಕೆ ಮಾಡಿ ಪ್ರಕಟಿಸಲಿದೆ.

ಸ್ಪೈಸ್ ಡೆಮಾಕ್ರಾಸಿ ಹೆಸರಿನ ಈ ಅಭಿಯಾನದಲ್ಲಿ ದೆಹಲಿಗೆ ತೆರಳಿ ವಾಪಸ್ ಬರುವ ಟಿಕೆಟ್ ದರದ ಮೇಲೆ ರಿಯಾಯಿತಿ ಸಿಗಲಿದೆ. ಮೂಲ ಟಿಕೆಟ್ ದರ ರೀಫಂಡ್ ಆಗಲಿದೆ. ಉದಾಹರಣೆಗೆ ಬೆಂಗಳೂರಿನಿಂದ ಫೆಬ್ರವರಿ 7ರಂದು ಬಿಟ್ಟು ಫೆಬ್ರವರಿ 8ರಂದು ಮತದಾನ ಮಾಡಿ ರಿಟರ್ನ್ ಆಗಬಹುದು. ಅಥವಾ ಫೆ.8ರಂದು ಇಲ್ಲಿಂದ ತೆರಳಿ, ಫೆ. 9ರಂದು ಹಿಂತಿರುಗಬಹುದು.
ಮತದಾನದ ದಿನ(ಫೆ.8)ದಂದು ಮತ ಹಾಕಿ ರಿಟರ್ನ್ ಆಗುವವರಿಗೆ ಟೂವೇ ಟಿಕೆಟ್ ದರ ರೀಫಂಡ್ ಆಗಲಿದೆ. ಮಿಕ್ಕ ದಿನಕ್ಕೆ ಒನ್ ವೇ ಮಾತ್ರ ರೀಫಂಡ್ ಆಗಲಿದೆ. ಫೆಬ್ರವರಿ 5ರೊಳಗೆ ಈ ಕೊಡುಗೆ ಪಡೆಯಲು ಬಯಸುವವರು ನೋಂದಣಿ ಮಾಡಿಕೊಳ್ಳಬಹುದು. ಫೆ.6 ರಂದು ಆಯ್ಕೆಯಾದವರ ಹೆಸರು ಪ್ರಕಟಿಸಲಾಗುತ್ತದೆ.
ಮತದಾನ ಮಾಡಿದ ಬಳಿಕ ಸೆಲ್ಫಿ ತೆಗೆದುಕೊಂಡು ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ಹಾಕಿಕೊಂಡು ಸ್ಪೈಸ್ ಡೆಮಾಕ್ರಾಸಿ ಎಂದು ಬರೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸ್ಪೈಸ್ ಜೆಟ್ ಚೇರ್ಮನ್ ಅಜಯ್ ಸಿಂಗ್ ಹೇಳಿದರು.












Click it and Unblock the Notifications