ದೆಹಲಿ ಮೆಟ್ರೋದಲ್ಲಿ ಓಡಲಿವೆ ಚಾಲಕ ರಹಿತ ರೈಲುಗಳು
ದೆಹಲಿ, ಜೂನ್ 26: ಅಂದುಕೊಂಡಂತೆ ಸಾಗಿದರೆ ಭಾರತದಲ್ಲೂ ಚಾಲಕ ರಹಿತ ಮೆಟ್ರೋ ರೈಲುಗಳು ಓಡಾಡುವ ದಿನಗಳು ಸದ್ಯದಲ್ಲೇ ಬರಲಿವೆ. ದೆಹಲಿ ಮೆಟ್ರೋದಲ್ಲಿ ಚಾಲಕ ರಹಿತ ರೈಲುಗಳ ಓಡಾಟದ ಪ್ರಯೋಗ ಯಶಸ್ವಿಯಾಗಿದ್ದು ಮೂರು ತಿಂಗಳಲ್ಲಿ ರೈಲುಗಳು ಓಡಾಟ ಆರಂಭಿಸಲಿವೆ.
ದೆಹಲಿಯ ಮ್ಯಾಗೆಂಟಾ ಮತ್ತು ಪಿಂಕ್ ಲೈನ್ಸ್ ನಲ್ಲಿ ಈ ರೈಲುಗಳು ಓಡಾಡಲಿವೆ. ಇದಕ್ಕೆ 'ಅನ್ಅಟೆಂಡೆಂಡ್ ಟ್ರೈನ್ ಆಪರೇಷನ್ (ಯುಟಿಒ)' ಎನ್ನುತ್ತಾರೆ. ಆರಂಭದಲ್ಲಿ ಸಿಬ್ಬಂದಿಗಳ ನಿರೀಕ್ಷಣೆಯಲ್ಲಿ ರೈಲುಗಳ ಓಡಾಟಕ್ಕೆ ದೆಹಲಿ ಮೆಟ್ರೋ ಅಧಿಕಾರಿಗಳು ಆಲೋಚಿಸಿದ್ದು ಮುಂದೆ ನಿಧಾನವಾಗಿ ಸಂಪೂರ್ಣ ಸ್ವಯಂ ಚಾಲಿತ ರೈಲುಗಳ ಓಡಾಟಕ್ಕೆ ನಿರ್ಧರಿಸಿದ್ದಾರೆ.

ಇದಕ್ಕಾಗಿ ವಿವಿಧ ಮಾದರಿಯ ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಿ ಯಶಸ್ವಿಯಾಗಿದ್ದಾರೆ. ಪರೀಕಾರ್ಥ ಓಡಾಟದ ವೇಳೆ ಎಲ್ಲೂ ಸಿಬ್ಬಂದಿಗಳ ಅಗತ್ಯ ಕಂಡು ಬಂದಿಲ್ಲ ಎಂದು ಮೆಟ್ರೋ ನಿಗಮದ ವಕ್ತಾರರು ತಿಳಿಸಿದ್ದಾರೆ.
ಜನಕ್ ಪುರಿ ಪಶ್ಚಿಮದಿಂದ ಬೊಟಾನಿಕಲ್ ಗಾರ್ಡನ್ ಮಧ್ಯೆ ಮ್ಯಾಗೆಂಟಾ ಲೈನ್ ನಲ್ಲಿ ಜೂನಿನಲ್ಲಿ ರೈಲು ಓಡಾಬೇಕಾಗಿತ್ತು. ಆದರೆ ಸ್ವಲ್ಪ ತಡವಾಗಿ ಅಂದರೆ ಅಕ್ಟೋಬರ್ ನಲ್ಲಿ ಓಡಾಟ ನಡೆಸಲಿದ್ದು. ಈ ವೇಳೆ ಈ ಮಾರ್ಗದಲ್ಲಿ ಚಾಲಕ ರಹಿತ ರೈಲುಗಳು ಓಡಾಡಲಿವೆ.
ಇನ್ನು ದೆಹಲಿ ಮೆಟ್ರೊದ ಮೂರನೇ ಹಂತದಲ್ಲಿ ಅರ್ಧ ಭಾಗ ಅಕ್ಟೋಬರ್ ನಲ್ಲಿ ಉದ್ಘಾಟನೆಯಾಗಲಿದ್ದು, ಮುಂದಿನ ಮಾರ್ಚ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೆರೆದುಕೊಳ್ಳಲಿದೆ.












Click it and Unblock the Notifications