ಪೌರತ್ವ ತಿದ್ದುಪಡಿ ಕಾಯ್ದೆ: ಪ್ರಧಾನಿಗೆ ಪಿ.ಚಿದಂಬರಂ ಡಿಫರೆಂಟ್ ಸಲಹೆ
ನವದೆಹಲಿ, ಜನವರಿ.13: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟ್ವಿಟ್ಟರ್ ನಲ್ಲಿ ಕಿಡಿ ಕಾರಿದ್ದಾರೆ. ಮಾಧ್ಯಮಗಳಲ್ಲಿ ವಿಮರ್ಶಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರೆ ಎಲ್ಲ ಸಮಸ್ಯೆಗೂ ಪರಿಹಾರ ಸಿಕ್ಕಂತೆ ಆಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ದೇಶದ ಬಹುತೇಕ ಪ್ರಜೆಗಳಲ್ಲಿ ಸಿಎಎ ಹಾಗೂ ಎನ್ಆರ್ ಸಿ ಬಗ್ಗೆ ಸಾಕಷ್ಟು ಗೊಂದಲಗಳಿವೆ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಪ್ರಧಾನಮಂತ್ರಿ ಭಾಷಣಗಳನ್ನು ಮಾಡುತ್ತಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಾಯ್ದೆಯಲ್ಲಿ ಯಾವುದೇ ಲೋಪಗಳಿಲ್ಲ ಎಂದು ಹೇಳುತ್ತಾರೆ. ಆದರೆ ಅಸಲಿ ಕಥೆ ಬೇರೆಯೇ ಇದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಎಲ್ಲ ನಾಯಕರಂತೆ ಪ್ರಧಾನಮಂತ್ರಿ ಮಾಧ್ಯಮಗಳ ಎದುರಿನಲ್ಲಿ ಮಾತನಾಡುವುದಿಲ್ಲ. ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನೂ ನೀಡುತ್ತಿಲ್ಲ. ಬದಲಿಗೆ ಬೃಹತ್ ವೇದಿಕೆಯಲ್ಲಿ ನಿಂತು ಭಾಷಣ ಮಾಡುತ್ತಾರೆ. ಹೀಗಾಗಿ ದೇಶದ ಪ್ರಜೆಗಳನ್ನು ಕಾಡುತ್ತಿರುವ ಪ್ರಶ್ನೆಗಳಿಗೆ ಇದುವರೆಗೂ ಉತ್ತರ ಸಿಗುತ್ತಿಲ್ಲ ಎಂದು ದೂರಿದ್ದಾರೆ.

ಕೇಂದ್ರದ ಮಾಜಿ ಸಚಿವ ಚಿದಂಬರಂರಿಂದ ಪ್ರಧಾನಿಗೆ ಸಲಹೆ
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧ ಪ್ರಶ್ನೋತ್ತರ ಕಾರ್ಯಕ್ರಮವನ್ನು ನಡೆಸಬೇಕು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಸಲಹೆ ನೀಡಿದ್ದಾರೆ. ಸಿಎಎ ಹಾಗೂ ಎನ್ಆರ್ ಸಿ ಬಗ್ಗೆ ಐವರು ವಿಮರ್ಶಕರು ಕೇಳುವ ಪ್ರಶ್ನೆಗಳಿಗೆ ನೇರಪ್ರಸಾರದಲ್ಲಿ ಪ್ರಧಾನಮಂತ್ರಿಯು ಉತ್ತರ ನೀಡಬೇಕು. ಇದರಿಂದ ಜನರಿಗೂ ಒಂದು ಸ್ಪಷ್ಟತೆ ಸಿಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

"ಸಿಎಎ ಬಗ್ಗೆ ಟೀಕೆಗಳಿಗೆ ಉತ್ತರ ನೀಡುವುದನ್ನು ಕಲಿಯಲಿ"
ಕೇಂದ್ರ ಸರ್ಕಾರವು ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ಕುರಿತು ಕೇಳಿ ಬಂದಿರುವ ಟೀಕೆಗಳನ್ನು ಸ್ವೀಕರಿಸುತ್ತಿಲ್ಲ. ಬದಲಿಗೆ ಎಲ್ಲವೂ ಸರಿಯಿದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ. ಪ್ರಧಾನಮಂತ್ರಿಯೇ ಟೀಕೆಗಳನ್ನು ಏಕೆ ಸ್ವಾಗತಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

"ದೇಶದ ಪ್ರಜೆಗಳು ಸಿಎಎ ಬಗ್ಗೆ ತಿಳಿದುಕೊಂಡಿದ್ದೇ ಬೇರೆ"
ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಕೆಲವರನ್ನು ಭಾರತದ ಪ್ರಜೆಗಳಲ್ಲ ಎಂದು ಗುರುತಿಸಲಾಗುತ್ತದೆ. ಅಂಥವರನ್ನು ದೇಶದಿಂದಲೂ ಹೊರ ಹಾಕಲಾಗುತ್ತದೆ ಎಂದು ನಾವೂ ಸೇರಿದಂತೆ ಸಾಕಷ್ಟು ಜನರು ನಂಬಿದ್ದಾರೆ. ಆದರೆ, ಸಿಎಎ ದೇಶದ ಪ್ರಜೆಗಳಿಗೆ ತೊಂದರೆ ನೀಡುವುದಿಲ್ಲ. ಯಾರಬ್ಬರನ್ನೂ ದೇಶದಿಂದ ಹೊರ ಹಾಕಲಾಗುವುದಿಲ್ಲ ಎಂದು ಪ್ರಧಾನಮಂತ್ರಿ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಪಿ.ಚಿದಂಬರಂ ವ್ಯಂಗ್ಯವಾಡಿದ್ದಾರೆ.

ಸಿಎಎ ಕುರಿತು ದಾರಿ ತಪ್ಪಿಸುವ ಕೆಲಸ ಎಂದಿದ್ದ ಮೋದಿ
ರಾಷ್ಟ್ರೀಯ ಯುವ ದಿನಾಚರಣೆ ಹಿನ್ನೆಲೆ ಭಾನುವಾರ ಪಶ್ಚಿಮ ಬಂಗಾಳ ಬೇಲೂರಿನ ರಾಮಕೃಷ್ಣ ಆಶ್ರಮದಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿರೋಧ ಪಕ್ಷಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಸಿಎಎ ಹಾಗೂ ಎನ್ಆರ್ ಸಿ ವಿಚಾರದಲ್ಲಿ ಕೆಲವರು ಗಾಳಿಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ರಾಜಕಾರಣಕ್ಕಾಗಿ ಯುವಕರ ದಾರಿ ತಪ್ಪಿಸುವ ಕೆಲಸವಾಗುತ್ತಿದೆ ಎಂದು ಕಿಡಿ ಕಾರಿದ್ದರು.












Click it and Unblock the Notifications