ಬ್ರೀಫ್‌ಕೇಸ್ ಸಂಸ್ಕೃತಿಗೆ ಅಂತ್ಯ ಹಾಡಿದ ನಿರ್ಮಲಾ ಸೀತಾರಾಮನ್
Recommended Video
ನವದೆಹಲಿ, ಜುಲೈ 5: ಇದೇ ಮೊದಲ ಬಾರಿಗೆ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಸುದೀರ್ಘ ಕಾಲದ ಸಂಪ್ರದಾಯಕ್ಕೆ ಅಂತ್ಯ ಹಾಡಿ ಹೊಸ ನಡೆ ಅನುಸರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇದುವರೆಗೆ ಬಜೆಟ್ ಮಂಡನೆ ಮಾಡುತ್ತಿದ್ದ ಸಚಿವರು ಚರ್ಮದ ಬ್ರೀಫ್‌ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ತರುತ್ತಿದ್ದರು. ದೊಡ್ಡ ಮೊತ್ತದ ಆಯವ್ಯಯದ ಕುರಿತಾಗಿ ಬಜೆಟ್ ಮಂಡಿಸುವುದರ ಸಂಕೇತವಾಗಿ ಈ ಬ್ರೀಫ್‌ಕೇಸ್‌ಅನ್ನು ಬಳಸಲಾಗುತ್ತಿತ್ತು.
ಆದರೆ, ನಿರ್ಮಲಾ ಸೀತಾರಾಮನ್ ಅವರು ಕೆಂಪು ಬಣ್ಣದ ಪುಟಾಣಿ ಚೀಲವನ್ನು ತಂದಿದ್ದಾರೆ. ಅದರಲ್ಲಿ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ಥಂಭದ ಲಾಂಛನವಿದೆ. ಈ ಚೀಲಕ್ಕೆ 'ಬಹಿ ಖಾತಾ' (ಲೆಡ್ಜರ್) ಎಂದು ಕರೆಯಲಾಗುತ್ತದೆ. ಈ ಮೂಲಕ ಹಳೆಯ 'ಬ್ರೀಫ್‌ಕೇಸ್ ಸಂಸ್ಕೃತಿ'ಯನ್ನು ಅಂತ್ಯಗೊಳಿಸಿದ್ದಾರೆ.

ನಿರ್ಮಲಾ ಅವರು ಹಿಡಿದುಕೊಂಡು ಬಂದ ಈ ಚೀಲದ ಚಿತ್ರ ಈ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದೆ.
'ಕೆಂಪು ಬಣ್ಣದ ಚೀಲವು ಪಾಶ್ಚಿಮಾತ್ಯ ಚಿಂತನೆಗಳ ಗುಲಾಮಗಿರಿಯಿಂದ ಆಚೆ ಬಂದಿರುವುದರ ಸಂಕೇತ. ಇದು ಸೂಟ್‌ಕೇಸ್ ಅಲ್ಲ, ಲೆಡ್ಜರ್ ಬುಕ್' ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಹೇಳಿದ್ದಾರೆ.
1947ರಲ್ಲಿ ಮೊದಲ ಹಣಕಾಸು ಸಚಿವ ಆರ್.ಎನ್. ಷಣ್ಮುಖಂ ಚೆಟ್ಟಿ ಅವರು ದೇಶದ ಪ್ರಪ್ರಥಮ ಹಣಕಾಸು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಚರ್ಮದ ಕಡತವನ್ನು ಕೊಂಡೊಯ್ದಿದ್ದರು.
1970ರಿಂದ ಹಣಕಾಸು ಸಚಿವರು ಚರ್ಮದ ಬ್ರೀಫ್‌ಕೇಸ್ ಹಿಡಿದು ಬರುವುದು ಸಂಪ್ರದಾಯವಾಗಿ ಆರಂಭವಾಗಿತ್ತು. ಇದು 1860ರಿಂದಲೂ ಬ್ರಿಟನ್‌ನಲ್ಲಿ ನಡೆದುಬರುತ್ತಿದ್ದ ಪದ್ಧತಿಯಾಗಿತ್ತು. ಭಾರತದಲ್ಲಿ ಬಳಸುತ್ತಿದ್ದ ಬ್ರೀಫ್‌ಕೇಸ್‌ನ ಬಣ್ಣ ಮತ್ತು ಆಕಾರ ಮಾತ್ರ ಬದಲಾಗಿತ್ತು.
ನಿರ್ಮಲಾ ಸೀತಾರಾಮನ್ ಅವರು 1970ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಬಜೆಟ್ ಮಂಡಿಸಿದ ನಂತರ 49 ವರ್ಷದ ಬಳಿಕ ಕೇಂದ್ರದಲ್ಲಿ ಬಜೆಟ್ ಮಂಡಿಸುತ್ತಿರುವ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.












Click it and Unblock the Notifications