ಯಡಿಯೂರಪ್ಪ ಕರೆತರಲು ದೆಹಲಿಯಲ್ಲಿ ಬಿಜೆಪಿ ಸಭೆ!
ನವದೆಹಲಿ, ಡಿ. 5 : ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳಿ ಬನ್ನಿ ಅಭಿಯಾನ ಗುರುವಾರ ನವದೆಹಲಿಗೆ ತಲುಪಿದೆ. ಕರ್ನಾಟಕದ ಬಿಜೆಪಿ ನಾಯಕರು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನವದೆಹಲಿಗೆ ತೆರಳಿದ್ದಾರೆ. ಸಂಸದ ಅನಂತ ಕುಮಾರ್ ನಿವಾಸದಲ್ಲಿ ನಾಯಕರು ಸರಣಿ ಸಭೆ ನಡೆಸುತ್ತಿದ್ದು, ಸಂಜೆ ರಾಜನಾಥ್ ಸಿಂಗ್ ಭೇಟಿಯಾಗುವ ನಿರೀಕ್ಷೆ ಇದೆ.
ಗುರುವಾರ ಬೆಳಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ ದೆಹಲಿಗೆ ತೆರಳಿದ್ದಾರೆ. ಮಧ್ಯಾಹ್ನ ತುಘಲಕ್ ರಸ್ತೆಯಲ್ಲಿರುವ ಅನಂತ್ ಕುಮಾರ್ ನಿವಾಸದಲ್ಲಿ ನಾಯಕರು ಸಭೆ ನಡೆಸುತ್ತಿದ್ದು, ಗುರುವಾರ ಸಂಜೆ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ನಾಯಕರು ಭೇಟಿಯಾಗಲು ಕಾಲಾವಕಾಶ ಕೋರಿದ್ದಾರೆ.

ಈ ಮಧ್ಯೆ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ನಾಯಕರು ಒಪ್ಪಿಗೆ ಸೂಚಿಸಿದ್ದು, ಗುರುವಾರ ಸಂಜೆ ಅವರಿಗೆ ಪಕ್ಷದಿಂದ ಅಧಿಕೃತ ಆಹ್ವಾನ ನೀಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜನಾಥ್ ಸಿಂಗ್ ಭೇಟಿಯ ನಂತರ ಈ ಕುರಿತು ಬಿಜೆಪಿ ನಾಯಕರು ಮಾಧ್ಯಮಗಳಿಗೆ ಹೇಳಿಕೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಗುರುವಾರ ರಾಜ್ಯ ನಾಯಕರು ದೆಹಲಿಗೆ ತೆರಳಿದ್ದು, ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ವಾಪಸ್ ಆಗುವ ಕುರಿತು ಚರ್ಚೆ ನಡೆಸಿ, ರಾಷ್ಟ್ರೀಯ ನಾಯಕರಿಗೆ ಅಂತಿಮ ತೀರ್ಮಾನ ತಿಳಿಸಲು ತೀರ್ಮಾನಿಸಿದ್ದಾರೆ. (ಯಡಿಯೂರಪ್ಪಗೆ ಜೇಟ್ಲಿ ಬುಲಾವ್)
ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಬೆಳಗ್ಗೆ ದೆಹಲಿಯಲ್ಲಿ ಒಂದು ಹಂತದ ಸಭೆ ನಡೆಸಿದ ನಾಯಕರು ಮಧ್ಯಾಹ್ನ ಅನಂತ್ ಕುಮಾರ್ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ. ಅನಂತ್ ಕುಮಾರ್ ನಿವಾಸದಲ್ಲಿ ಸಭೆ ಮುಗಿದ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲು ಸಮಯಾವಕಾಶ ಕೋರಿದ್ದಾರೆ. ಸಂಜೆ ಬಿಜೆಪಿ ನಾಯಕರು ಅನಂತ್ ಕುಮಾರ್ ಅವರೊಂದಿಗೆ ರಾಜನಾಥ್ ಸಿಂಗ್ ಭೇಟಿಯಾಗುವುದು ಖಚಿತವಾಗಿದೆ.
10ರೊಳಗೆ ಸ್ಪಷ್ಟ ಚಿತ್ರಣ : ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳುವ ಕುರಿತು ಡಿ.10ರೊಳಗೆ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ. ಶುಕ್ರವಾರ ನಡೆಯಲಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಯಡಿಯೂರಪ್ಪ ವಾಪಸ್ ಆಗುವ ಕುರಿತು ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ನಂತರ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿ, ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. (ಬಿಜೆಪಿಯಿಂದ ಯಡಿಯೂರಪ್ಪ ದೂರವಾಗಲು 7 ಕಾರಣಗಳು!)
ಡಿ 9ರಂದು ಕೆಜೆಪಿ ಸಭೆ : ಬೆಂಗಳೂರಿನಲ್ಲಿ ಡಿ.9ರಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ನಾಯಕರ ಸಭೆ ಕರೆದಿದ್ದು, ಅಂದಿನ ಸಭೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಬೇಕೆ ಅಥವ ಯಡಿಯೂರಪ್ಪ ಬಿಜೆಪಿಗೆ ಮರಳಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಆದ್ದರಿಂದ ಡಿ.10ರೊಳಗೆ ಯಡಿಯೂರಪ್ಪ ಬಿಜೆಪಿಗೆ ಮರಳುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ.












Click it and Unblock the Notifications