Breaking: ಆದಿತ್ಯನಾಥ್ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ನವದೆಹಲಿ/ಲಕ್ನೋ, ಆಗಸ್ಟ್ 26: 2007ರ ಆಪಾದಿತ ದ್ವೇಷ ಭಾಷಣ ಪ್ರಕರಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.
2007ರ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ದ್ವೇಷ ಭಾಷಣ ಪ್ರಕರಣದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಲು ಯುಪಿ ಸರಕಾರ ನಿರಾಕರಿಸಿದ್ದನ್ನು ಎತ್ತಿ ಹಿಡಿದಿರುವ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಯುಪಿ ಸರಕಾರ ಮಂಜೂರಾತಿ ನಿರಾಕರಣೆಯ ವಿಚಾರಕ್ಕೆ ಹೋಗುವ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠ ಹೇಳಿದೆ.

ಮಂಜೂರಾತಿಗೆ ಸಂಬಂಧಿಸಿದ ಕಾನೂನು ಪ್ರಶ್ನೆಗಳನ್ನು ಸೂಕ್ತ ಪ್ರಕರಣದಲ್ಲಿ ವ್ಯವಹರಿಸಲು ಮುಕ್ತವಾಗಿ ಇಡಲಾಗುವುದು ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಹೇಳಿದೆ.
ಫೆಬ್ರವರಿ 2018 ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತನ್ನ ತೀರ್ಪಿನಲ್ಲಿ, ತನಿಖೆ ನಡೆಸುವಲ್ಲಿ ಅಥವಾ ಕಾನೂನು ಕ್ರಮಕ್ಕೆ ಅನುಮತಿ ನೀಡಲು ನಿರಾಕರಿಸುವ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೇ ಕಾರ್ಯವಿಧಾನದ ದೋಷ ಕಂಡುಬಂದಿಲ್ಲ ಎಂದು ಹೇಳಿದೆ.
2007ರಲ್ಲಿ ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಗೋರಖ್‌ಪುರದ ಪೊಲೀಸ್ ಠಾಣೆಯಲ್ಲಿ ಆಗಿನ ಸಂಸದರಾಗಿದ್ದ ಆದಿತ್ಯನಾಥ್ ಮತ್ತು ಇತರ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಆದಿತ್ಯನಾಥ್ ಅವರ ದ್ವೇಷದ ಭಾಷಣದ ನಂತರ ಯುಪಿಯ ಗೋರಖ್‌ಪುರದಲ್ಲಿ ಆ ದಿನ ಹಲವಾರು ಹಿಂಸಾಚಾರದ ಘಟನೆಗಳು ವರದಿಯಾಗಿವೆ ಎಂದು ಆರೋಪಿಸಲಾಗಿದೆ.












Click it and Unblock the Notifications