ಅಯೋಧ್ಯಾ : ಆ.15ರೊಳಗೆ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಅವಕಾಶ
ನವದೆಹಲಿ, ಮೇ 10 : ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ನಡುವಿನ ವಿವಾದಕ್ಕೆ ಮಾತುಕತೆಯ ಮೂಲಕ ಆಗಸ್ಟ್ 15ರೊಳಗೆ ಪರಿಹಾರ ಕಂಡುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯ ಮಧ್ಯಸ್ಥಿಕೆ ಸಮಿತಿಗೆ ಶುಕ್ರವಾರ ಆದೇಶಿಸಿದೆ.
ಮಧ್ಯಸ್ಥಿಕೆ ಮಂಡಳಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಸಮಯ ಯಾಚಿಸಿರುವುದರಿಂದ, ಸಮಯ ನೀಡುವುದು ಸಮಂಜಸ ಎಂದು ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅಭಿಪ್ರಾಯಪಟ್ಟರು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರೊಂದಿಗೆ ನ್ಯಾಯಮೂರ್ತಿಗಳಾದ ಎಸ್ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು ಕೂಡ ಸಾಂವಿಧಾನಿಕ ಪೀಠದಲ್ಲಿ ಇದ್ದರು.

ದಶಕಗಳಿಂದ ವಿವಾದದ ಸುಳಿಯಲ್ಲಿ ಸಿಲುಕಿರುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಧ್ಯಸ್ಥಿಕೆ ಸಮಿತಿಯನ್ನು ರಚಿಸಲು ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಈ ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಎಫ್ಎಂ ಕಲಿಫುಲ್ಲಾ ಅವರು ವಹಿಸಿದ್ದು, ಸಮಿತಿಯ ಸದಸ್ಯರಾಗಿ ಆಧ್ಯಾತ್ಮಿಕ ಗುರು ರವಿ ಶಂಕರ್ ಗುರೂಜಿ ಮತ್ತು ನ್ಯಾಯವಾದಿ ಶ್ರೀರಾಮ್ ಪಂಚು ಅವರಿದ್ದಾರೆ.












Click it and Unblock the Notifications