ಸದ್ಯ, ಹಿಸ್ಟರಿ ಮೇಷ್ಟ್ರಾಗಲಿಲ್ಲ! ಇಮ್ರಾನ್ ಗೆ ಆನಂದ್ ಮಹೀಂದ್ರಾ ಛೀಮಾರಿ
ಮುಂಬೈ, ಆಗಸ್ಟ್ 26: ವಾಣಿಜ್ಯ ವಿಷಯ ಮಾತ್ರವಲ್ಲದೆ, ಯಾವುದೇ ಸಕಾಲಿಕ ವಿಷಯಗಳ ಬಗ್ಗೆ ಟ್ವೀಟ್ ಮಾಡಿ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಅಭಿವ್ಯಕ್ತಿಸುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕಿಚಾಯಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಈ ವರ್ಷಾರಂಭದಲ್ಲಿ ಇರಾನ್ ರಾಜಧಾನಿ ತೆಹ್ರಾನ್ ಗೆ ತೆರಳಿದ್ದ ಇಮ್ರಾನ್ ಖಾನ್ ಅಲ್ಲಿನ ಸಭೆಯೊಂದರಲ್ಲಿ ಮಾತನಾಡುತ್ತ, "ಜಪಾನ್ ಮತ್ತು ಜರ್ಮನಿ ದೇಶಗಳು ಒಂದೇ ಗಡಿಯನ್ನು ಹಂಚಿಕೊಂಡ ದೇಶಗಳು, ಅವು ನೆರೆ ರಾಷ್ಟ್ರಗಳು" ಎಂದಿದ್ದರು. ಆ ವಿಡಿಯೋವನ್ನು ಮತ್ತೊಮ್ಮೆ ಹಂಚಿಕೊಂಡಿರುವ ಆನಂದ್ ಮಹೀಂದ್ರಾ,"ದೇವರೇ, ಸದ್ಯ, ಇವರನ್ನು ನೀನು ನನ್ನ ಹಿಸ್ಟರಿ(ಇತಿಹಾಸ) ಅಥವಾ ಜಿಯಾಗ್ರಫಿ(ಭೂಗೋಳಶಾಸ್ತ್ರ) ಮೇಷ್ಟ್ರನ್ನಾಗಿ ಮಾಡದೆ ಇದ್ದಿದ್ದಕ್ಕೆ ಧನ್ಯವಾದ" ಎಂದಿದ್ದಾರೆ!
ಈ ವರ್ಷಾರಂಭದಲ್ಲಿ ಇಮ್ರಾನ್ ಖಾನ್ ನೀಡಿದ್ದ ಈ ಹೇಳಿಕೆಗಳ ತುಣುಕಿನ ವಿಡಿಯೋ, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಸದ್ದು ಮಾಡಿದೆ. ಇಮ್ರಾನ್ ಖಾನ್ ಅವರ ಕಾಲೆಳೆಯಲು ಕಾಯುತ್ತಿದ್ದ ಹಲವರಿಗೆ ಮೃಷ್ಟಾನ್ನ ಭೋಜನ ನೀಡಿದಂತಾಗಿದೆ.
Recommended Video

ಇಮ್ರಾನ್ ಖಾನ್ ಹೇಳಿದ್ದೇನು?
"ಜರ್ಮನಿ ಮತ್ತು ಜಪಾನ್ ದೇಶಗಳು ನೆರೆ ರಾಷ್ಟ್ರಗಳು, ಅವು ಒಂದೇ ಗಡಿಯನ್ನು ಹೊಂದಿವೆ. ಆ ಎರಡು ದೇಶಗಳೂ ಪರಸ್ಪರ ವ್ಯವಹಾರದಲ್ಲಿ ತೊಡಗಿದರೆ ಅವುಗಳ ನಡುವಿನ ಸಂಬಂಧ ಗಟ್ಟಿಯಾಗುತ್ತದೆ" ಎಂದು ಇಮ್ರಾನ ಖಾನ್ ಹೇಳಿದ್ದರು.
ಜರ್ಮನಿ ಮತ್ತು ಜಪಾನ್ ದೇಶಗಳು ಎರಡನೇ ವಿಶ್ವಯುದ್ಧಕ್ಕೂ ಮುನ್ನ ಮಿಲಿಯನ್ ಗಟ್ಟಲೆ ನಾಗರಿಕರನ್ನು ಕೊಂದರು. ಆದರೆ ವಿಶ್ವಯುದ್ಧದ ನಂತರ ಅವರಿಗೆ ತಪ್ಪಿನ ಅರಿವಾಗಿ ಗಡಿಯಲ್ಲಿ ಉಭಯ ದೇಶಗಳೂ ಹಲವು ಕೈಗಾರಿಕೆಗಳನ್ನು ಕಟ್ಟಿಕೊಂಡವು" ಎಂದು ಇಮ್ರಾನ್ ಖಾನ್ ಹೇಳಿದ್ದರು.

ಟ್ವೀಟ್ ಮಾಡಿ ಛೀಮಾರಿ ಮಾಡಿದ ಆನಂದ್ ಮಹೀಂದ್ರಾ
ಇಮ್ರಾನ್ ಖಾನ್ ರ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವ ಆನಂದ್ ಮಹೀಂದ್ರಾ, "ದೇವರೇ, ಸದ್ಯ, ಇವರನ್ನು ನೀನು ನನ್ನ ಹಿಸ್ಟರಿ(ಇತಿಹಾಸ) ಅಥವಾ ಜಿಯಾಗ್ರಫಿ(ಭೂಗೋಳಶಾಸ್ತ್ರ) ಮೇಷ್ಟ್ರನ್ನಾಗಿ ಮಾಡದೆ ಇದ್ದಿದ್ದಕ್ಕೆ ಧನ್ಯವಾದ" ಎಂದಿದ್ದಾರೆ. ಆನಂದ್ ಮಹೀಂದ್ರಾ ಅವರ ಈ ಟ್ವೀಟ್ ಅನ್ನು 10 ಸಾವಿರಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದರೆ, 41 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ!

ಜಪಾನ್ ಎಲ್ಲಿದೆ? ಜರ್ಮನಿ ಎಲ್ಲಿದೆ?
ಜಪಾನ್ ಪೆಸಿಫಿಕ್ ಸಮುದ್ರದಲ್ಲಿರುವ ಒಂದು ದ್ವೀಪ ರಾಷ್ಟ್ರವಾಗಿದ್ದು, ಅದು ಯಾವ ದೇಶದೊಂದಿಗೂ ಭೂಗಡಿಯನ್ನು ಹೊಂದಿಲ್ಲ. ಜೊತೆಗೆ ಅದು ಏಷ್ಯಾ ಖಂಡದ ಒಂದು ರಾಷ್ಟ್ರ. ಆದರೆ ಜರ್ಮನಿ ಯುರೋಪ್ ಖಂಡದ ರಾಷ್ಟ್ರ. ಇಮ್ರಾನ್ ಖಾನ್ ಏನೋ ಹೇಳುವುದಕ್ಕೆ ಹೋಗಿ ಏನನ್ನೋ ಹೇಳಿದರೋ, ಅಥವಾ ಏನೂ ಗೊತ್ತಿಲ್ಲದೆ ಹಾಗೆ ಹೇಳಿದರೋ ದೇವರಿಗೇ ಗೊತ್ತು! ಆದರೆ ಈ ವಿಡಿಯೋದಿಂದಾಗಿ ಅವರು ಅದೆಷ್ಟೋ ದಿನ ನೆಟ್ಟಿಗರಿಗೆ ಆಹಾರವಾಗಿದ್ದಂತೂ ಸತ್ಯ!

370 ನೇ ವಿಧಿ ರದ್ದತಿ ಸ್ವಾಗತಿಸಿದ್ದ ಮಹೀಂದ್ರಾ
ಇತ್ತೀಚೆಗೆ ಕೇಂದ್ರ ಸರ್ಕಾರ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀದಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಆನಂದ್ ಮಹೀಂದ್ರಾ, "ಈ ನಿರ್ಧಾರವನ್ನು ಮೊದಲೇ ತೆಗೆದುಕೊಳ್ಳಬಹುದಿತ್ತಲ್ಲ ಎನ್ನಿಸುವ ವಿಷಯಗಳಲ್ಲಿ ಇದೂ ಒಂದು. ಕಾಶ್ಮೀರ ಭಾರತದ ಅವಿಭಾಜ್ಯ ಭಾಗ ಎಂಬುದನ್ನು ಒತ್ತಿಹೇಳಲು, ಅದನ್ನು ಸಂಭ್ರಮಿಸಲು ಇದು ಸಕಾಲ" ಎಂದಿದ್ದರು.












Click it and Unblock the Notifications