ಎವರೆಸ್ಟ್ ಮೇಲೆ ರಾಷ್ಟ್ರಗೀತೆ ಹಾಡಿದ ಐಎಎಫ್ ಅಧಿಕಾರಿ
ನವದೆಹಲಿ ಮೇ 31: ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ವಿಕ್ರಾಂತ್ ಉನಿಯಾಲ್ ಅವರು ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿ, ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ.
"ಪ್ರಯಾಗ್ ರಾಜ್‌ನ ಸೆಂಟ್ರಲ್ ಏರ್ ಕಮಾಂಡ್‌ನಲ್ಲಿ ನಿಯೋಜನೆಗೊಂಡಿರುವ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ವಿಕ್ರಾಂತ್ ಉನಿಯಾಲ್ ಅವರು ಮೇ 21ರಂದು ಮೌಂಟ್ ಎವರೆಸ್ಟ್‌ನ ತುತ್ತ ತುದಿಗೆ ಏರಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ ಹಾಗೂ ರಾಷ್ಟ್ರಗೀತೆ ಹಾಡಿದ್ದಾರೆ,'' ಎಂದು ಪ್ರಯಾಗರಾಜ್‌ನ ಸೆಂಟ್ರಲ್ ಏರ್ ಕಮಾಂಡ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ್ಯ ವೀರರಿಗೆ ಸಮರ್ಪಣೆ:
ವಿಕ್ರಾಂತ್ ಉನಿಯಾಲ್ ಅವರು ತಮ್ಮ ಈ ಸಾಧನೆಯನ್ನು ಭಾರತದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ ಸಾವಿರಾರು ವೀರರು ಹಾಗೂ ಚಳವಳಿಗೆ ಅರ್ಪಿಸಿದ್ದಾರೆ ಎಂದು ಭಾರತೀಯ ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

"ಮೌಂಟ್ ಎವರೆಸ್ಟ್ ಚಾರಣವೇ ಅತ್ಯಂತ ರೋಚಕ ಮತ್ತು ಐತಿಹಾಸಿಕ ಕ್ಷಣಗಳಾಗಿವೆ. ವಿಂಗ್ ಕಮಾಂಡರ್ ವಿಕ್ರಾಂತ್ ಉನಿಯಾಲ್ ಅವರು ಮೌಂಟ್ ಎವರೆಸ್ಟ್ ಮೇಲೆ ನಿಂತು ದೇಶಕ್ಕಾಗಿ ತ್ಯಾಗ ಮಾಡಿದ ವೀರರಿಗಾಗಿ ಗೌರವ ಸಲ್ಲಿಸಿದ್ದಾರೆ ಹಾಗೂ ರಾಷ್ಟ್ರಗೀತೆ ಹಾಡಿದ್ದಾರೆ,'' ಎಂದು ಪ್ರಯಾಗ್ ರಾಜ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ(ರಕ್ಷಣೆ) ಗ್ರೂಪ್ ಕ್ಯಾಪ್ಟನ್ ಸಮೀರ್ ಗಾಂಗ್ಖೇಡ್ಕರ್ ತಿಳಿಸಿದ್ದಾರೆ.

ಏಪ್ರಿಲ್ 15 ರಂದು ಚಾರಣ ಆರಂಭ:
"ವಿದೇಶದ ಹಲವು ಚಾರಣಿಗರು ಒಳಗೊಂಡ ತಂಡದ ಸದಸ್ಯರೊಂದಿಗೆ ಏಪ್ರಿಲ್ 15 ರಂದು ನೇಪಾಳ ರಾಜಧಾನಿ ಕಠ್ಮಂಡು ನಿಂದ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಚಾರಣ ಪ್ರಾರಂಭವಾಯಿತು. ಉತ್ತರಕಾಶಿಯ ನೆಹರು ಇನ್ಸ್ಟಿಟೂಟ್ ಆಫ್ ಮೌಂಟೇನಿಯರಿಂಗ್, ಸಿಯಾಚಿನ್ ನ ಆರ್ಮಿ ಮೌಂಟೇನಿಯರಿಂಗ್ ಇನ್ಸ್ಟಿಟೂಟ್ ಮತ್ತು ಅರುಣಾಚಲ ಪ್ರದೇಶದ ನ್ಯಾಷನಲ್ ಇನ್ಸ್ಟಿಟೂಟ್ ಆಫ್ ಮೌಂಟೇನಿಯರಿಂಗ್ ಹಾಗೂ ಅಲೈಡ್ ಸ್ಫೋಟ್ಸ್ ನಿಂದ ತರಬೇತಿ ಪಡೆದ ವಿಂಗ್ ಕಮಾಂಡರ್ ವಿಕ್ರಾಂತ್ ಉನಿಯಾಲ್ ಅವರು ತರಬೇತಿ ಹೊಂದಿದ ಪರ್ವತಾರೋಹಿ ಆಗಿದ್ದಾರೆ,'' ಎಂದು ಗ್ರೂಪ್ ಕ್ಯಾಪ್ಟನ್ ಸಮೀರ್ ಗಾಂಗ್ಖೇಡ್ಕರ್ ಮಾಹಿತಿ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications