ನಿರ್ಭಯಾ ಅತ್ಯಾಚಾರ ಪ್ರಕರಣ: ಸುಪ್ರೀಂಕೋರ್ಟ್ ನಲ್ಲಿ ಕ್ಯುರೇಟಿವ್ ಅರ್ಜಿ ವಿಚಾರಣೆ
ನವದೆಹಲಿ, ಜನವರಿ.14: ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಇಬ್ಬರು ಅಪರಾಧಿಗಳು ಸಲ್ಲಿಸಿರುವ ಕ್ಯುರೇಟಿವ್ ಅರ್ಜಿ ಮಂಗಳವಾರ ವಿಚಾರಣೆಗೆ ಬರಲಿದೆ. ಮಧ್ಯಾಹ್ನ 1.45ರ ವೇಳೆಗೆ ಸುಪ್ರೀಂಕೋರ್ಟ್ ಅಪರಾಧಿಗಳ ಅರ್ಜಿಯನ್ನು ವಿಚಾರಣೆ ನಡೆಸಲಿದೆ.
ನಾಲ್ವರು ಅಪರಾಧಿಗಳ ಪೈಕಿ ಇಬ್ಬರು ಅಪರಾಧಿಗಳಾದ ವಿನಯ್ ಶರ್ಮಾ (26), ಮುಕೇಶ್ (32) ಸುಪ್ರೀಂಕೋರ್ಟ್ ಎದುರು ಕ್ಷಮಾಪಣೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ನ್ಯಾ. ಎನ್.ವಿ.ರಮಣ್, ನ್ಯಾ. ಅರುಣ್ ಮಿಶ್ರಾ, ನ್ಯಾ. ಆರ್.ಎಫ್. ನಾರಿಮನ್, ನ್ಯಾ.ಬಾನುಮತಿ ಹಾಗೂ ನ್ಯಾ. ಅಶೋಕ್ ಭೂಷಣ್ ನೇತೃತ್ವದ ಪಂಚಸದಸ್ಯರ ಪೀಠವು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಇಂದಿನ ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠದಲ್ಲಿರುವ ಇಬ್ಬರು ನ್ಯಾಯಮೂರ್ತಿಗಳೇ ಈ ಹಿಂದೆ ಮರಣದಂಡನೆ ವಿಧಿಸುವಂತೆ ತೀರ್ಪು ನೀಡಿದ್ದರು. ನಿರ್ಭಯಾ ಅತ್ಯಾಚಾರ ಪ್ರಕರಣ ವಿಚಾರಣೆ ನಡೆಸಿದ್ದ ನ್ಯಾ.ಬಾನುಮತಿ ಹಾಗೂ ನ್ಯಾ.ಅಶೋಕ್ ಭೂಷಣ್ ನೇತೃತದ ಪೀಠವು 2017ರಲ್ಲಿ ಅಪರಾಧಿಗಳಿಗೆ ಮರಣ ದಂಡನೆಯನ್ನು ವಿಧಿಸಿತ್ತು.

ಕ್ಷಮಾಪಣೆ ಸಲ್ಲಿಸಲು ಕೊನೆಯ ಅವಕಾಶ:
ಸುಪ್ರೀಂಕೋರ್ಟ್ ಇಬ್ಬರು ಅಪರಾಧಿಗಳು ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯನ್ನು ವಿಚಾರಣೆ ನಡೆಸಲಿದೆ. ಒಂದು ವೇಳೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದರೆ, ಇಬ್ಬರು ಅಪರಾಧಿಗಳು ತಮ್ಮ ತಪ್ಪಿಗೆ ಕ್ಷಮಾಪಣೆ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಬಹುದು. ಇದು ಅಪರಾಧಿಗಳ ಪಾಲಿನ ಕೊನೆಯ ಅವಕಾಶವಾಗಿರಲಿದೆ. ರಾಷ್ಟ್ರಪತಿಗಳು ಈ ಮನವಿಯನ್ನು ತಿರಸ್ಕರಿಸಿದರೆ, ಗಲ್ಲುಶಿಕ್ಷೆ ವಿಧಿಸುವುದು ಪಕ್ಕಾ ಆಗಲಿದೆ.
ಇನ್ನು, ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಅಪರಾಧಿಗಳಿಗೆ ಜನವರಿ.22ರಂದು ಗಲ್ಲು ಶಿಕ್ಷೆ ವಿಧಿಸಿ ಎಂದು ದೆಹಲಿ ಪಟಿಯಾಲಾ ಹೌಸ್ ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಪ್ರಕರಣದ ಅಪರಾಧಿಗಳಾದ ಮುಕೇಶ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31)ನ್ನು ಸದ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.












Click it and Unblock the Notifications