ಯುವ ರಾಜ್ ಕುಮಾರ್-ಶ್ರೀದೇವಿ ಭೈರಪ್ಪ ನಿಶ್ಚಿತಾರ್ಥಕ್ಕೆ ಸಿದ್ಧವಾಗ್ತಿದೆ ಸಾಂಸ್ಕೃತಿಕ ನಗರಿ
ಮೈಸೂರು, ಜುಲೈ.05: ಸಾಂಸ್ಕೃತಿಕ ನಗರಿಯಲ್ಲಿ ವರನಟ ಡಾ.ರಾಜ್ ಕುಮಾರ್ ಮೊಮ್ಮಗ, ನಟ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವ ರಾಜ್ ಕುಮಾರ್ ಮದುವೆ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
ಇಲ್ಲಿನ ಖಾಸಗಿ ಹೋಟೆಲ್ ಸದರನ್ ಸ್ಟಾರ್ ನಲ್ಲಿ ಸಿದ್ಧತಾ ಕಾರ್ಯ ನಡೆಯುತ್ತಿದ್ದು, ವಿಜಯನಗರದ ಮನೆಯಲ್ಲಿ ಸಾಂಪ್ರದಾಯಿಕ ಶಾಸ್ತ್ರಗಳು ನಡೆಯಲಿವೆ. ಬಳಿಕ ಸ್ಟಾರ್ ಹೋಟೆಲ್ ನಲ್ಲಿ ಫೋಟೋ ಶೂಟ್, ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾಂಸ್ಕೃತಿಕ ನಗರಿಯಲ್ಲಿ ಅಣ್ಣಾವ್ರ ಮೊಮ್ಮಗನ ನಿಶ್ಚಿತಾರ್ಥ
ವಧು- ವರನ ಕುಟುಂಬದವರು, ಸಂಬಂಧಿಕರು ಹಾಗೂ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದ್ದು, ಯುವ ರಾಜ್ ಕುಮಾರ್ ಬಹುಕಾಲದ ಗೆಳತಿ ಮೈಸೂರಿನ ಶ್ರೀದೇವಿ ಭೈರಪ್ಪ ಅವರನ್ನು ಇಂದು ವರಿಸಲಿದ್ದಾರೆ.

ಶ್ರೀದೇವಿ ಭೈರಪ್ಪ ಅವರು ಮೈಸೂರಿನಲ್ಲೇ ಹುಟ್ಟಿ ಬೆಳೆದು ಉನ್ನತ ಶಿಕ್ಷಣ ಮುಗಿಸಿ, ದೊಡ್ಮನೆ ಒಡೆತನದಲ್ಲಿರುವ ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ ಉಸ್ತುವಾರಿ ವಹಿಸಿಕೊಂಡಿದ್ದರು.
ಯುವ ರಾಜ್ ಕುಮಾರ್ ಅವರ 7 ವರ್ಷದ ಗೆಳತಿಯಾಗಿದ್ದ ಶ್ರೀದೇವಿ ಭೈರಪ್ಪ, ಈ ಹಿಂದೆ ತೆರೆಕಂಡಿದ್ದ ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಪರೋಕ್ಷವಾಗಿ ತೊಡಗಿಸಿಕೊಂಡಿದ್ದರು.
ಯುವ ರಾಜ್ ಕುಮಾರ್, ಶ್ರೀದೇವಿ ಸ್ನೇಹ ಪ್ರೀತಿಗೆ ತಿರುಗಿ ಈಗ ಮದುವೆಯ ಹೊಸ್ತಿಲಿಗೆ ಬಂದು ನಿಂತಿದ್ದು, ಎರಡೂ ಮನೆಯವರ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥ ನಡೆಯುತ್ತಿದೆ.












Click it and Unblock the Notifications