ಯುವಬ್ರಿಗೇಡ್ ಕಾರ್ಯಕರ್ತ ಮತ್ತು ಜೈನ ಮುನಿ ಹತ್ಯೆ ಸತ್ಯಾಸತ್ಯತೆ ಪರಿಶೀಲನೆಗೆ BJPಯಿಂದ 2 ತಂಡ ರಚನೆ
ಮೈಸೂರು, ಜುಲೈ, 11: ತಿ.ನರಸೀಪುರದ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಹಾಗೂ ಬೆಳಗಾವಿ ಜೈನ ಮುನಿ ಹತ್ಯೆಯ ಸತ್ಯಾಸತ್ಯತೆ ಪರಿಶೀಲನೆಗೆ ರಾಜ್ಯಾಧ್ಯಕ್ಷನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್‌ನಾರಾಯಣ್ ತಿಳಿಸಿದ್ದಾರೆ.
ತಿ.ನರಸೀಪುರದಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಮನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶಾಸಕ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್, ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ಎನ್.ಮಹೇಶ್, ಪ್ರೊ. ಮಲ್ಲಿಕಾರ್ಜುನ, ಮುಖಂಡರಾದ ಅಪ್ಪಣ್ಣ, ಮೈ.ವಿ.ರವಿಶಂಕರ್, ಮಂಗಳಾ ಸೋಮಶೇಖರ್ ಅವರನ್ನು ಒಳಗೊಂಡ ತಂಡ ಭೇಟಿ ನೀಡಲಿದೆ.

ಇನ್ನು ಬೆಳಗಾವಿಯ ಜೈನಮುನಿ ಕಾಮಕುಮಾರ್ ನಂದಿಮಹಾರಾಜ ಹತ್ಯೆ ಪರಿಶೀಲನೆಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಮಹೇಶ್, ಶಾಸಕ ಅಭಯ್ ಪಾಟೀಲ್, ಈರಣ್ಣ ಕಪಾಡಿ, ಸಂಸದೆ ಮಂಗಳಾ ಸುರೇಶ್ ಅಂಗಡಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಬೆಳಗಾವಿ ಜಿಲ್ಲಾಧ್ಯಕ್ಷ ಅನಿಲ್ ಬೆನಕೆ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ್ ನೇರ್ಲಿ, ಬೆಳಗಾವಿ ಗ್ರಾಮಾಂತರ ವಿಭಾಗದ ಅಧ್ಯಕ್ಷ ಸಂಜಯ್ ಪಾಟೀಲ್, ರಾಜ್ಯ ವಕ್ತಾರ ಎಂ.ಬಿ.ಜಿರಲಿ ಅವರನ್ನು ಒಳಗೊಂಡ ತಂಡ ತೆರಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ
ತಿ.ನರಸೀಪುರದಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಫೋಟೋ ತೆಗೆಸಿದ್ದಕ್ಕೆ ಯುವ ಬ್ರೀಗೇಡ್ ಸಂಚಾಲಕನನ್ನು ಹತ್ಯೆ ಮಾಡಲಾಗಿದೆ. ತಿ.ನರಸೀಪುರದ ಪಟ್ಟಣದ ಹೊರವಲಯದ ಸಂತೆಮಾಳದ ಸಮೀಪದ ಇರುವ ಸರ್ವಿಸ್ ರಸದತೆಯರ ಬಳಿ ಈ ಘಟನೆ ನಡೆದಿದೆ. ಮೃತನನ್ನು ಯುವ ಬ್ರೀಗೇಡ್ ತಿ.ನರಸೀಪುರ ತಾಲೂಕು ಸಂಚಾಲಕ ವೇಣು ಗೋಪಾಲ್ (32) ಎಂದು ಗುರುತಿಸಲಾಗಿದೆ.
ತಾಲೂಕಿನಲ್ಲಿ ಹನುಮ ಜಯಂತಿ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ವೇಳೆ ಅಲಂಕೃತ ವ್ಯಾನ್‌ಗೆ ಭಾರತಮಾತೆ ಫೋಟೋ ಜೊತೆ ನಟ ಪುನೀತ್ ರಾಜ್‌ಕುಮಾರ್ ಫೋಟೋ ಹಾಕಲಾಗಿತ್ತು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ವೇಣುಗೋಪಾಲ್ ಜಯಂತಿಯಲ್ಲಿ ನಟರ ಫೋಟೋ ಬೇಡ ಎಂದು ತೆಗೆಸಿದ್ದರು. ಅಲ್ಲದೆ, ಗುಂಜಾ ನರಸಿಂಹಸ್ವಾಮಿ ದೇಗುಲಕ್ಕೆ ಯಾವುದೇ ವಾಹನ ಬಿಡದಂತೆ ಪೊಲೀಸರಿಗೆ ಮನವಿ ಮಾಡಿದ್ದನು.
ಈ ಎರಡು ಕಾರಣಗಳಿಂದ ಕುಪಿತಗೊಂಡ ಮಣಿಕಂಠ ಹಾಗೂ ಸಂದೇಶ್ ವೇಣುಗೋಪಾಲ್ ಮೇಲೆ ಆಕ್ರೋಶಗೊಂಡಿದ್ದರು. ಜೊತೆಗೆ ಎರಡು ಗುಂಪಿನ ನಡುವೆ ಗಲಾಟೆ ಆಗಿತ್ತು. ನಂತರ ಮತ್ತೆ ರಾತ್ರಿ ರಾಜಿ ಸಂಧಾನಕ್ಕೆ ಕರೆದಾಗ ವೇಣುಗೋಪಾಲ್ ಅನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ತಾಲೂಕಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಮಣಕಂಠ ಹಾಗೂ ಸಂದೇಶ್‌ನನ್ನು ಬಂಧಿಸಲಾಗಿದೆ. ಅಲ್ಲದೆ ಬಿಗಿ ಪೊಲೀಸ್ ಭದ್ರತೆಯ ನಡುವೆ ವೇಣುಗೋಪಾಲ್ ಮೃತದೇಹವನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡುವ ಮೂಲಕ ಅಂತ್ಯಸಂಸ್ಕಾರ ನಡೆಸಲಾಗಿದೆ.
ಚಕ್ರವರ್ತಿ ಸೂಲಿಬೆಲೆ ಭೇಟಿ
ಯುವ ಬ್ರೀಗೇಡ್ ರಾಜ್ಯ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಮೈಸೂರಿನಲ್ಲಿ ಕೆ.ಆರ್.ಆಸ್ಪತ್ರೆ ಶವಗಾರಕ್ಕೆ ಭೇಟಿ ನೀಡಿ ಮೃತದೇಹದ ಅಂತಿದರ್ಶನ ಪಡೆದುಕೊಂಡರು. ಅಲ್ಲದೆ ಇದೇ ವೇಳೆ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇನ್ನು "ಧರ್ಮದ ಬಗ್ಗೆ ಅಪಾರ ಪ್ರೀತಿ ನನ್ನ ಪತಿಗೆ ಇತ್ತು. ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೊಂದವರಿಗೆ ತಕ್ಕ ಶಾಸ್ತಿ ಆಗಬೇಕು" ಎಂದು ಪತ್ನಿ ಪೂರ್ಣಿಮಾ ಒತ್ತಾಯಿಸಿದ್ದಾರೆ.
ಪ್ರಕರಣದ ಸಂಬಂಧ 6 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಾಗಿದ್ದು, ಇನ್ನಿತರ ಆರೋಪಿಗಳ ಸೆರೆಗೆ ತಂಡವನ್ನೂ ಸಹ ರಚಿಸಲಾಗಿದೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.












Click it and Unblock the Notifications