ಮೈಸೂರು ಮಹಾನಗರ ಪಾಲಿಕೆಯಿಂದ ಯೋಗಲಕ್ಷ್ಮೀ ಯೋಜನೆ ಜಾರಿಗೆ
ಮೈಸೂರು, ಮೇ 31: ಮೈಸೂರು ಮಹಾನಗರ ಪಾಲಿಕೆಯಿಂದ ನವಜಾತ ಹೆಣ್ಣು ಮಕ್ಕಳಿಗೆ 25 ಸಾವಿರ ರೂ ನೀಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯ ಯೋಗಲಕ್ಷ್ಮೀ ಯೋಜನೆಯನ್ನು ಜೂ.1ರ ನಾಳೆಯಿಂದ ಜಾರಿಗೆ ತರಲು ಮುಂದಾಗಿದೆ. ಮೊದಲ ಸಾವಿರ ಶಿಶುಗಳಿಗೆ 25 ಸಾವಿರ ರೂಪಾಯಿಯ ಕಾರ್ಡ್ ಗಳನ್ನು ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿನೂತನ ಯೋಜನೆಗೆ ಯೋಗಲಕ್ಷ್ಮಿ ಎಂದು ಹೆಸರಿಡಲಾಗಿದ್ದು, ಅನುಷ್ಠಾನದ ಬಗ್ಗೆ ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹಮ್ಮದ್ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಇದೇ ಸಂದರ್ಭ, ಮೈಸೂರಿನಲ್ಲಿ ಸ್ಥಗಿತಗೊಂಡಿರುವ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿ, ಬಾಕಿ ಇರುವ 25 ಕಟ್ಟಡಗಳ ತೆರವಿಗೆ ಶೀಘ್ರ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.

ದೇವರಾಜ ಅರಸು ರಸ್ತೆ ಸುತ್ತಮುತ್ತ ಬಹುಮಹಡಿ ವಾಹನ ನಿಲುಗಡೆ ತಾಣ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಶೀಘ್ರ ಆರಂಭಿಸಲು ನಿರ್ಧರಿಸಲಾಯಿತು. ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವ ಸ್ಥಳದಲ್ಲಿ ನಿರ್ಮಿಸಿರುವ ಪಾರ್ಕ್ ಗಳಲ್ಲಿ ಅಮೃತ್ ಯೋಜನೆಯಡಿ ವ್ಯಾಯಾಮ ಉಪಕರಣಗಳನ್ನು ಅಳವಡಿಸುವ ಪ್ರಸ್ತಾವನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.












Click it and Unblock the Notifications