ದೇವನೂರು ಕೃತಿ ಟೀಕಿಸಿದ ಪ್ರತಾಪ್ ಸಿಂಹಗೆ ಯತೀಂದ್ರ ತಿರುಗೇಟು!
ಮೈಸೂರು, ಜುಲೈ 14: ಸಾಹಿತಿ ದೇವನೂರು ಮಹದೇವ ರಚಿಸಿರುವ 'ಆರ್‌ಎಸ್‌ಎಸ್ ಆಳ ಮತ್ತು ಅಗಲ' ಕೃತಿಯನ್ನು ವಿಕೃತಿ ಎಂದು ಕರೆದಿರುವ ಮೈಸೂರು ಸಂಸದ ಪ್ರತಾಪ್ ಸಿಂಹಗೆ ವರುಣ ಶಾಸಕ ಹಾಗೂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರತಾಪ್ ಸಿಂಹ ಈ ಹಿಂದೆ ಏನನ್ನು ಬರೆಯುತ್ತಿದ್ದರು ಎನ್ನುವುದನ್ನು ಒಮ್ಮೆ ನೆನೆಪು ಮಾಡಿಕೊಳ್ಳಲಿ, ಅವರು ಬಿಜೆಪಿ ನಾಯಕರ ವಿರುದ್ಧ ಬೆತ್ತಲೆ ಜಗತ್ತು ಎಂಬ ಕೃತಿ ಬರೆದಿದ್ದರು. ಇಂದು ಅದೇ ಪಕ್ಷಕ್ಕೆ ಸೇರಿಕೊಂಡು ರಾಜಕಾರಣ ಮಾಡುತ್ತಿದ್ದಾರೆ" ಎಂದು ತಿರುಗೇಟು ಕೊಟ್ಟರು.
"ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಅವರನ್ನು ಕಾಂಗ್ರೆಸ್ ಅಡಿಯಾಳು ಎಂದು ಟೀಕಿಸಿರುವುದು ಸಂಸದರ ಮನಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಯಾರಾದರೂ ವಿಕೃತಿಯ ಕೃತಿಗಳನ್ನು ಬರೆದಿದ್ದರೆ ಅದು ಪ್ರತಾಪ್ ಸಿಂಹ ಮಾತ್ರ" ಎಂದು ಯತೀಂದ್ರ ಟೀಕಿಸಿದರು.

"ಆರ್‌ಎಸ್ಎಸ್ ಈ ಹಿಂದೆ ಬ್ಯಾನ್ ಆಗಿದ್ದ ಸಂಸ್ಥೆ. ಅದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಬ್ರಿಟಿಷರ ಜೊತೆ ಸೇರಿಕೊಂಡು ಸಾತಂತ್ರ್ಯ ಹೋರಾಟಗಾರರಿಗೆ ಮೋಸ ಮಾಡಿದ್ದಂತಹ ಸಂಸ್ಥೆ, ದೇಶದಲ್ಲಿ ಕೋಮುವಾದ ಹರಡುವ ಸಂಸ್ಥೆ. ಪ್ರತಾಪ್ ಸಿಂಹ ಅಂತಹ ಸಂಸ್ಥೆಯ ಅಡಿಯಾಳೋ ಎಂಬುದನ್ನು ತಿಳಿಸಲಿ. ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕಾದ ಸಂಸದರು, ಆರ್‌ಎಸ್‌ಎಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಂದ ಸಾರ್ವಜನಿಕರಿಗೆ ಏನು ಪ್ರಯೋಜನ?" ಎಂದು ಪ್ರಶ್ನಿಸಿದರು.

"ಕಾಂಗ್ರೆಸ್‌ನ ಆಳಾಗಿ ದೇವನೂರು ಮಹಾದೇವ ಬರೆದಿರುವ ಆರ್ಎಸ್ಎಸ್ ಆಳ-ಅಗಲ ಕೃತಿಯಲ್ಲ, ಅದೊಂದು ವಿಕೃತಿ ಕುಸುಮ ಬಾಲೆಯ ನಂತರ ದೇವನೂರು ಒಂದಿಷ್ಟು ಸೃಜನಶೀಲತೆ ಉಳಿಸಿಕೊಂಡಿದ್ದಾರೆ ಎಂದುಕೊಂಡಿದ್ದೆ. ಆದರೆ, ಆರ್ಎಸ್ಎಸ್ ಕುರಿತು ಬರೆಯಲು ಹೋಗಿ ತಮ್ಮ ಘನತೆ ಕಳೆದುಕೊಂಡಿದ್ದಾರೆ. ಜೊತೆಗೆ, ರಾಹುಲ್ ಗಾಂಧಿ ಭಾಷಣದಿಂದ ಪ್ರೇರಿತರಾಗಿ ಕೃತಿ ಬರೆದಂತಿದೆ" ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು.












Click it and Unblock the Notifications