ಮೈಸೂರು ಮುಡಾ ಅಧ್ಯಕ್ಷರಾಗಿ ಯಶಸ್ವಿ ಸೋಮಶೇಖರ್ ನೇಮಕ
ಮೈಸೂರು, ಡಿಸೆಂಬರ್ 21: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನೂತನ ಅಧ್ಯಕ್ಷರಾಗಿ ಯಶಸ್ವಿ ಸೋಮಶೇಖರ್ ಅವರು ನೇಮಕವಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಶಿಫಾರಸ್ಸು ಮಾಡಿದ್ದು, ಈ ಸಂಬಂಧ ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯಾದ ಸತೀಶ್ ಕಬಾಡಿ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಬುಧವಾರ ಡಿಸೆಂಬರ್ 21ರಂದು ಬೆಳಗ್ಗೆ 11 ಗಂಟೆಗೆ ಮುಡಾ ಕಚೇರಿಯಲ್ಲಿ ಯಶಸ್ವಿ ಸೋಮಶೇಖರ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕರ್ನಾಟಕ ವಿಧಾನಸಭೆಯ ಅವಧಿ ಮುಗಿಯಲು ಇನ್ನು ಕೆಲವೇ ತಿಂಗಳು ಬಾಕಿ ಇರುವಾಗಲೇ ಈ ನೇಮಕಾತಿ ನಡೆದಿದೆ.

ಕಳೆದ ಜುಲೈನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಚ್‌ವಿ ರಾಜೀವ್ ಅವರ ನೇಮಕಾತಿಯನ್ನು ಸರ್ಕಾರ ರದ್ದು ಮಾಡಿತ್ತು. ಅಂದಿನಿಂದ ಹೊಸಬರನ್ನು ನೇಮಕ ಮಾಡಿರಲಿಲ್ಲ. ಯಶಸ್ವಿ ಸೋಮಶೇಖರ್ ಹಾಗೂ ಎಚ್‌ವಿ ರಾಜೀವ್ ಸೇರಿ ಅನೇಕ ಮಂದಿ ಹಿರಿಯ ಕಾರ್ಯಕರ್ತರು ಅಧ್ಯಕ್ಷ ಸ್ಥಾನಕ್ಕೆ ಭಾರೀ ಲಾಬಿ ನಡೆಸಿದ್ದರು. ಆದರೆ ಅಂತಿಮವಾಗಿ ಯಶಸ್ವಿ ಅವರಿಗೆ ಈ ಹುದ್ದೆ ಒಲಿದು ಬಂದಿದೆ.
ಯಶಸ್ವಿ ಸೋಮಶೇಖರ್ ಅವರಿಗೆ ಅಧ್ಯಕ್ಷಗಾಧಿ ನೀಡುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಅವರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿತ್ತು. ಹಿರಿಯ ನಾಯಕರ ಮಟ್ಟದಲ್ಲಿ ಸ್ಥಳೀಯ ಕಾರ್ಯಕರ್ತರು ದೊಡ್ಡದಾಗಿಯೇ ಲಾಭಿ ಮಾಡಿದ್ದರು. ಸಚಿವ ಎಸ್‌ಟಿ ಸೋಮಶೇಖರ್ ಅವರು ಕೂಡ ಹಿಂದಿನ ಅಧ್ಯಕ್ಷ ಎಚ್‌ವಿ ರಾಜೀವ್ ಅವರಿಗೆ ಮತ್ತೊಮ್ಮೆ ಅಧ್ಯಕ್ಷರನ್ನಾಗಿ ಮಾಡಲು ತೆರೆ ಹಿಂದೆ ಪ್ರಯತ್ನ ಮಾಡಿದ್ದರು ಎನ್ನಲಾಗಿದೆ.
ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪಕ್ಷ ಸಂಘಟನೆ ದೃಷ್ಟಿಯಿಂದ ಕಾರ್ಯಕರ್ತರಿಗೆ ಪ್ರಾತಿನಿಧ್ಯ ನೀಡಲಾಗಿದೆ ಎನ್ನಲಾಗುತ್ತಿದೆ. ಈಗ ಯಶಸ್ವಿ ಸೋಮಶೇಖರ್ ಆಯ್ಕೆಯು ಮೈಸೂರ ಭಾಗದ ಒಕ್ಕಲಿಗ ಸಮುದಾಯಕ್ಕೆ ಬೆಣ್ಣೆ ಸವರುವ ಪ್ರಯತ್ನವಾಗಿದೆ ಎಂಬ ಚರ್ಚೆ ಕೇಳಿಬಂದಿದೆ. ಈ ಮೂಲಕ ಒಕ್ಕಲಿಗ ಸಮುದಾಯದವರ ಮತಗಳನ್ನು ಪಡೆಯಲು ಮಾಡುವ ಪ್ರಯತ್ನವಾಗಿದೆ ಎಂದು ಕರೆಯಲಾಗಿದೆ.
ಇನ್ನೇನು ಕೆಲವೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತದೆ. ಹೀಗಾಗಿ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಸ್ಟೋಟವಾಗುವ ಲಕ್ಷಣಗಳು ಇವೆ. ಹೀಗಾಗಿ ಯಶಸ್ವಿ ಸೋಮಶೇಖರ್ ಅವರ ನೇಮಕದಿಂದ ಇದು ನಿಯಂತ್ರಣವಾಗಲಿದೆ ಎಂಬ ಲೆಕ್ಕಾಚಾರ ಇದಾಗಿದೆ. ಹೀಗಾಗಿಯೇ ಯಶಸ್ವಿ ಸೋಮಶೇಖರ್ ಅವರಿಗೆ ಅಧ್ಯಕ್ಷ ಪಟ್ಟವನ್ನು ನೀಡಲಾಗಿದೆ. ಆದರೆ ಇನ್ನು ಕೇವಲ ಮೂರು ಅಥವಾ ನಾಲ್ಕು ತಿಂಗಳಷ್ಟೇ ಯಶಸ್ವಿ ಸೋಮಶೇಖರ್ ಅವರು ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.












Click it and Unblock the Notifications