ಶೃಂಗೇರಿ ಶ್ರೀಗಳ ಜೊತೆ ಚರ್ಚಿಸಿ ಉತ್ತರಾಧಿಕಾರಿ ನೇಮಕ
ಮೈಸೂರು, ಡಿ. 22 : ಯದುವಂಶದ ಉತ್ತರಾಧಿಕಾರಿ ಬಗ್ಗೆ ಈವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಮೃತರ ಉತ್ತರಾದಿ ಕ್ರಿಯೆಗಳೆಲ್ಲವೂ ಪೂರ್ಣಗೊಂಡ ನಂತರ ಮಹಾರಾಣಿಯವರು ಶೃಂಗೇರಿ ಶ್ರೀಗಳ ಜತೆ ಚರ್ಚೆ ನಡೆಸಿ ನಂತರ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾದ್ಯತೆ ಇದೆ ಎಂದು ಮಹಾರಾಜರ ಆಪ್ತ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಲಕ್ಷ್ಮೀ ನಾರಾಯಣ ಯದುವಂಶದ ಮಹಾರಾಜರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಉತ್ತರಾಧಿಕಾರಿ ಬಗ್ಗೆ ಈವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಉತ್ತರಾಧಿಕಾರಿ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಮಾಧ್ಯಮಗಳ ಸೃಷ್ಟಿ ಎಂದು ಅವರು ಹೇಳಿದರು.

ಮೃತರ ಉತ್ತರಾದಿ ಕ್ರಿಯೆಗಳೆಲ್ಲವೂ ಪೂರ್ಣಗೊಂಡ ನಂತರ ಮಹಾರಾಣಿಯವರು ಶೃಂಗೇರಿ ಶ್ರೀಗಳ ಜತೆ ಚರ್ಚೆ ನಡೆಸಿ, ಉತ್ತರಾಧಿಕಾರಿ ನೇಮಕದ ಬಗ್ಗೆ ನಿರ್ದಾರ ಕೈಗೊಳ್ಳುವ ಸಾಧ್ಯತೆ ಇದೆ. ಇದುವರೆಗೂ ಉತ್ತರಾಧಿಕಾರಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.[ಶ್ರೀಕಂಠದತ್ತ ಒಡೆಯರ್ ಉತ್ತರಾಧಿಕಾರಿ ಯಾರು]
ವೈಕುಂಠ ಸಮಾರಾಧನೆ : ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಉತ್ತರಾದಿಕ್ರಿಯೆಗಳು ಶನಿವಾರದಿಂದ ಅರಮನೆಯಲ್ಲಿ ಆರಂಭವಾಗಿದ್ದು, ಎರಡು ದಿನಗಳ ಕಾಲ ನಡೆಯಲಿವೆ. ಒಡೆಯರ್ ನಿಧನದ ಬಳಿಕ ಮಧುವನದಲ್ಲಿ ಪ್ರೇತಾತ್ಮಕ್ಕೆ ತರ್ಪಣ, (ಧರ್ಮೋದಕ) ಅನ್ನ ಪ್ರಸಾದ ಇತ್ಯಾದಿ ವಿಧಿಗಳು ಈಗಾಗಲೇ ನಡೆದಿವೆ. [ಯದುವಂಶಕ್ಕೆ ಉತ್ತರಾಧಿಕಾರಿ ಯಾರು? ಸಸ್ಪೆನ್ಸ್]
ಡಿ.22ರಂದು ರಾಜವಂಶಸ್ಥ ಪಿತೃವರ್ಗಕ್ಕೆ ಒಡೆಯರ್ ಅವರನ್ನು ಸೇರಿಸುವ ಧಾರ್ಮಿಕ ಕ್ರಿಯೆ (ಸಪಿಂಡೀಕರಣ) ನಡೆಯಲಿದೆ. ವೇದಗಳ ಪಾರಾಯಣ, ದೇಶೀಕ ಪ್ರಬಂಧ ಪಠಣ, ಗೋದಾನ, ನವಧ್ಯಾನ್ಯ ಇತ್ಯಾದಿ ದಾನಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಡಿ.23ರಂದು ಬೆಳಗ್ಗೆ 11ಕ್ಕೆ ವೈಕುಂಠ ಸಮಾರಾಧನೆ ನಡೆಯಲಿದ್ದು, ಯದುವಂಶದ ಪದ್ಧತಿಯಂತೆ ಶ್ರೀ ಕೃಷ್ಣನ ಆರಾಧನೆ, ಕಲ್ಯಾಣ ಮಂಟಪದಲ್ಲಿ ಶ್ರೀ ವಾಗೀಶ ಸ್ವಾಮೀಜಿಗಳ ಪಾದಪೂಜೆ ನಡೆಯಲಿದೆ. ಅಂದು ಸಮ್ಮರ್ ಪ್ಯಾಲೇಸ್‌ನಲ್ಲಿ 25 ಸಾವಿರ ಜನರಿಗೆ ಊಟ ಏರ್ಪಡಿಸಲಾಗಿದೆ. [ಚಿರನಿದ್ರೆಗೆ ಜಾರಿದ ಶ್ರೀಕಂಠದತ್ತ ಒಡೆಯರ್]
ವಿವಿಐಪಿ, ವಿಐಪಿಗಳಿಗೆ ಅರಮನೆ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ವೈಕುಂಠ ಸಮಾರಾಧನೆ ದಿನದಂದು ತಿರುಪತಿ, ಧರ್ಮಸ್ಥಳ, ಶೃಂಗೇರಿ, ನಂಜನಗೂಡು, ಮೇಲುಕೋಟೆ, ಚಾಮುಂಡೇಶ್ವರಿ...ಹೀಗೆ ನಾಡಿನ ಪ್ರಸಿದ್ಧ ದೇವಾಲಯಗಳಿಂದ ಬರುವ ಪ್ರಸಾದವನ್ನು ಒಡೆಯರ್ ಬಂಧು ಬಾಂಧವರಿಗೆ ವಿತರಿಸಲಾಗುವುದು ಎಂದು ಹೇಳಿದರು.












Click it and Unblock the Notifications