ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಾಹಿತಿ ಭೈರಪ್ಪ ಬರೆದ ಪತ್ರದಲ್ಲೇನಿದೆ?
ಮೈಸೂರು, ನವೆಂಬರ್. 15: ಕೊಡಗಿನ ನೀರು ಬಳಸಲು ಕೇಂದ್ರ ಸರ್ಕಾರದ ಮೂಲಕ ನ್ಯಾಯಾಲಯದ ಮೆಟ್ಟಿಲೇರುವ ತಮಿಳುನಾಡು ವಿರುದ್ಧ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್.ಎಲ್. ಭೈರಪ್ಪನವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಕೊಡಗಿನಲ್ಲಿ ಸುರಿದಿರುವ ಹುಚ್ಚು ಮಳೆ ಹಾಗೂ ಭಾರೀ ಬಿರುಗಾಳಿಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ವೆಚ್ಚವನ್ನು ಮಾಡಬೇಕಿದೆ. ಈ ಮಧ್ಯೆ ಸಾರ್ವಜನಿಕರೂ ಸಂತ್ರಸ್ತರ ಪುನರ್ವಸತಿಗಾಗಿ ದೇಣಿಗೆಗಳನ್ನು ನೀಡುತ್ತಿದ್ದಾರೆ.
ಆದರೆ ಮಳೆ ಇರಲಿ, ಇಲ್ಲದಿರಲಿ ತಗಾದೆ ತೆಗೆದು ನೀರು ಕಬಳಿಸುವ, ಅದಕ್ಕಾಗಿ ಕೇಂದ್ರ ಹಾಗೂ ನ್ಯಾಯಾಲಯದ ಮೊರೆ ಹೋಗಿ ನೀರು ಪಡೆಯುವ ತಮಿಳುನಾಡು ತನ್ನ ನೀರಿನ ಮೂಲಸ್ಥಾನವಾದ ಕೊಡಗಿನ ಹಾನಿಯನ್ನು ತುಂಬುವುದು ತನ್ನ ಕರ್ತವ್ಯ ಅಲ್ಲ ಎಂಬಂತೆ ತೆಪ್ಪಗಿರುವುದು ಯಾವ ನ್ಯಾಯ? ಎಂದು ಭೈರಪ್ಪ ಅವರು ಪ್ರಶ್ನಿಸಿದ್ದಾರೆ.

ಪ್ರಸ್ತುತ, ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವುದು ಕರ್ನಾಟಕದ ಕರ್ತವ್ಯ' ವಾದರೆ, ಅದರ ಫಲ ಉಣ್ಣುವ ಹಕ್ಕು' ಮಾತ್ರ ತಮಿಳ್ನಾಡಿನದ್ದಾಗಿದೆ.
ಈ ಅಂಶಗಳನ್ನು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರ, ಇಲ್ಲವೇ ಸಂಬಂಧಿಸಿದ ಟ್ರಿಬ್ಯುನಲ್ ಅಥವಾ ಉನ್ನತ ನ್ಯಾಯಾಲಯಕ್ಕಾಗಲಿ ಹಕ್ಕೊತ್ತಾಯ ಮಾಡುವುದು ಅತ್ಯಗತ್ಯವೆಂದು ಭಾವಿಸಿದ್ದು, ಅದಕ್ಕೆ ಸಂಬಂಧಿಸಿದವರು ಮನ್ನಣೆ ನೀಡದೇ ಇದ್ದರೂ, ನಮ್ಮ ಪಾಲಿನ ನೀರಿನ ಹಕ್ಕೊತ್ತಾಯ ವೇಳೆ ಈ ಅಂಶವೂ ಆಧಾರವಾಗಲಿದೆ ಎಂದು ಭೈರಪ್ಪ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಭೈರಪ್ಪನವರು ಪತ್ರ ಬರೆದಿದ್ದು, ಅದರ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.












Click it and Unblock the Notifications