ಮಹಿಳೆ ಸವಾಲುಗಳನ್ನು ಸರಾಗವಾಗಿ ಸ್ವೀಕರಿಸುತ್ತಾಳೆ:ತ್ರಿಷಿಕಾ ಕುಮಾರಿ
ಮೈಸೂರು, ಮಾರ್ಚ್ 13: ಮಹಿಳೆಯೆಂದರೆ ಮದುವೆಗೆ ಮಾತ್ರ ಸೀಮಿತವಾಗದಿರಲಿ. ಆಕೆ ಇನ್ನಿತರ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬೇಕು ಎಂದು ಮೈಸೂರು ರಾಜವಂಶಸ್ಥೆ ತ್ರಿಷಿಕಾ ಕುಮಾರಿ ತಿಳಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕುರಿತು ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ರಾಜಮನೆತನ ಪ್ರಾರಂಭಿಸಿದ್ದು ಕೂಡ ಮಹಿಳೆ ಕೆಂಪರಾಜಮ್ಮಣ್ಣಿ. ಮಹಿಳೆಯಿಂದ ಪ್ರಾರಂಭವಾದ ರಾಜಮನೆತನ ಈ ದಿನ ಈ ಮಟ್ಟಕ್ಕೆ ಬೆಳೆದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಸಮಾಜದ ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರಿದ್ದಾರೆ. ನಾನು ನನ್ನ ಮಗನಿಗೆ ಈಗಿನಿಂದಲೇ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಸುತ್ತಿದ್ದೇನೆ. ಮಹಿಳೆಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕೃತಿ ಎಂದು ತಿಳಿಸಿದರು.

ಮಹಿಳಾ ಸಬಲೀಕರಣ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಆಗಬೇಕಿದೆ. ಆಕೆ ಯಾರಿಗೂ ಕಮ್ಮಿ ಇಲ್ಲ, ಪುರುಷನಿಗೆ ಸಮಾನವಾಗಿ ಪ್ರತಿ ಹಂತದಲ್ಲು ಸಾಧಿಸಬಲ್ಲಳು, ಕೈಯ್ಯಲ್ಲಿ ಸೌಟನ್ನು ಹಿಡಿಯುವುದರಿಂದ ಹಿಡಿದು ಆಕಾಶದಲ್ಲಿ ವಿಮಾನವನ್ನು ಹಾರಿಸುವ ಹಂತದವರೆಗೂ ತಲುಪುವ ತಾಕತ್ತು ಮಹಿಳೆಯರಿಗಿದೆ. ಎಂಥಹ ಸಂದಿಗ್ಧ ಪರಿಸ್ಥಿಯಲ್ಲೂ ಸವಾಲುಗಳನ್ನು ಸರಾಗವಾಗಿ ಸ್ವೀಕರಿಸುವ ಶಕ್ತಿ ಮಹಿಳೆಯದ್ದು ಎಂದು ಪ್ರಶಂಸಿಸಿದರು.
ಮಹಿಳೆಯ ಕುರಿತು ಒಂದು ಕಿರು ನಾಟಕ ಕೂಡ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು.












Click it and Unblock the Notifications