MUDA: ನಮ್ಮ ಕಾಲದಲ್ಲೂ ತಪ್ಪಾಗಿದೆ! ಬಿಜೆಪಿ ಕಾಲದಲ್ಲಿ ಹೆಚ್ಚು ತಪ್ಪಾಗಿದೆ; ಮುಡಾ ಕ್ಲೀನ್ ಮಾಡುವೆ ಎಂದ ಸಿಎಂ
ಮೈಸೂರು: ನಮ್ಮ ಕಾಲದಲ್ಲೂ ತಪ್ಪುಗಳು ಆಗಿವೆ. ಬಿಜೆಪಿ ಕಾಲದಲ್ಲಿ ಅತಿ ಹೆಚ್ಚು ತಪ್ಪಾಗಿದ್ದು, ಮುಡಾ ಗೆಬ್ಬೆದ್ದು ಹೋಗಿದ್ದು ಅದನ್ನು ಕ್ಲೀನ್ ಮಾಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರವನ್ನು ರಾಜಕೀಯ ಮಾಡುವ ಉದ್ದೇಶದಿಂದ ಬಿಜೆಪಿಯವರು ಪ್ರತಿಭಟನೆ ಮಾಡುವುದಾದರೆ ನಾವು ಇದಕ್ಕೆ ಪ್ರತಿಯಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ. ಮುಡಾ ಹಗರಣದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದರು.

ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಿಕೊಳ್ಳಲು ಆಗದೆ ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ಮುಡಾ ವಿಚಾರವನ್ನು ತೆಗೆದುಕೊಂಡು ವಿವಾದ ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಲು ಬೇರೆ ವಿಷಯವೇ ಇಲ್ಲದೆ ಕಾನೂನು ಪ್ರಕಾರ ನನ್ನ ಪತ್ನಿ ಮುಡಾದಿಂದ ನಿವೇಶನ ಪಡೆದಿದ್ದರೂ ಅದನ್ನು ವಿವಾದ ಮಾಡುತ್ತಿದ್ದಾರೆ ಎಂದರು.
2005ರಲ್ಲಿ ನನ್ನ ಭಾಮೈದ ಮಲ್ಲಿಕಾರ್ಜುನ ಕೃಷಿ ಜಮೀನನ್ನು ಖರೀದಿ ಮಾಡಿದ್ದಾರೆ. ನನ್ನ ಪತ್ನಿಗೆ 2010ರಲ್ಲಿ ದಾನ ನೀಡಿದ್ದಾರೆ. ಆಗಲೂ ಅದು ಕೃಷಿ ಭೂಮಿಯೇ ಆಗಿತ್ತು. 2014ರಲ್ಲಿ ಮುಡಾದವರು ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಿದ್ದಾರೆ. ನಮ್ಮ ಜಮೀನನ್ನು ಕಳೆದುಕೊಂಡ ಮೇಲೆ ನಾವು ಹಾಗೆಯೇ ಬಿಟ್ಟು ಬಿಡಬೇಕಿತ್ತಾ? ಎಂದು ಪ್ರಶ್ನಿಸಿದರು.
ವಾಲ್ಮೀಕಿ ನಿಗಮದಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ, ಇಡಿ, ಸಿಬಿಐ ಸೇರಿದಂತೆ ಮೂರು ಹಂತದಲ್ಲಿ ತನಿಖೆ ನಡೆಯುತ್ತಿದೆ. ವರದಿ ಬರುವವರೆಗೂ ಖಜಾನೆಯಿಂದ ನೇರವಾಗಿ ಹಣ ವರ್ಗಾವಣೆಯಾಗಿದೆ ಎಂದು ಹೇಳುವುದು ಸರಿಯಲ್ಲ. ಚಾರ್ಜ್‌ಶೀಟ್ ಹಾಕದೆ ಹೇಗೆ ವರದಿ ಕೊಡಲು ಸಾಧ್ಯ? ತನಿಖೆ ಸಂಪೂರ್ಣವಾಗಿ ಮುಗಿದ ನಂತರ ಯಾರು ತಪ್ಪು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಒತ್ತಾಯಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಬ್ಯಾಂಕ್‌ನವರು ತಪ್ಪು ಮಾಡಿದ್ದಾರೆ. ಹಾಗಂತ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರಣ ಎಂದು ಹೇಳಲು ಆಗುತ್ತಾ? ಇವರು ರಾಜೀನಾಮೆ ಕೊಡುತ್ತಾರಾ ಎಂದು ಪ್ರಶ್ನಿಸಿದರು.












Click it and Unblock the Notifications