ಜೆಡಿಎಸ್ ಮುಖಂಡರ ಮನೆಗೆ ಸಿದ್ದರಾಮಯ್ಯ ಭೇಟಿನೀಡಿದ್ದೇಕೆ?
ನಂಜನಗೂಡಿನಲ್ಲಿ ಪ್ರಚಾರ ನಡೆಸುತ್ತಿದ್ದ ಸಿದ್ದರಾಮಯ್ಯ ಇಂದು ಮೈಸೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹಸ್ವಾಮಿಯವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಸಂಚಲ ಮೂಡಿಸಿತ್ತು.
ಮೈಸೂರು, ಏಪ್ರಿಲ್ 1 : ಏಪ್ರಿಲ್ 9 ರಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 31 ರಿಂದಲೇ ಮೈಸೂರಿನಲ್ಲಿ ಠಿಕಾಣಿ ಹೂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಬಿರುಸಿನ ಪ್ರಚಾರ ನಡೆಸುತ್ತಿರುವುದರಿಂದ ಎಲ್ಲರ ಕುತೂಹಲ ಏಪ್ರಿಲ್ 13 ರ ಫಲಿತಾಂಶದ ಮೇಲೇ ನೆಟ್ಟಿದೆ.
ಹೀಗಿರುವಾಗ ನಂಜನಗೂಡಿನಲ್ಲಿ ಪ್ರಚಾರ ನಡೆಸುತ್ತಿದ್ದ ಸಿದ್ದರಾಮಯ್ಯ ಇಂದು ಮೈಸೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹಸ್ವಾಮಿಯವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಸಂಚಲ ಮೂಡಿಸಿತ್ತು.[ಉಪಚುನಾವಣೆ - ಚಿರ ಯುವಕರಂತಾದ ಯಡಿಯೂರಪ್ಪ]
ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನರಸಿಂಹಸ್ವಾಮಿ, ಸಿದ್ದರಾಮಯ್ಯ ಮತ್ತು ನಾನು ಇಬ್ಬರೂ ಆತ್ಮೀಯ ಸ್ನೇಹಿತರು, ಆದ್ದರಿಂದ ನಮ್ಮ ಮನೆಗೆ ಸೌಜನ್ಯದ ಭೇಟಿ ನೀಡಿದ್ದಾರಷ್ಟೆ. ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇಲ್ಲದಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ, ಸಹಕಾರ ನೀಡುವಂತೆ ಕೇಳಿದ್ದಾರೆ. ಆದರೆ ನಾವು ತಟಸ್ಥರಾಗಿರುವುದಾಗಿ ತಿಳಿಸಿದ್ದೇವೆ ಎಂದಿದ್ದಾರೆ.[ನಂಜನಗೂಡಲ್ಲಿ ಸಿದ್ದರಾಮಯ್ಯ - ಯಡಿಯೂರಪ್ಪ ಕಾರು ಮುಖಾಮುಖಿ]

ಭೇಟಿಯಾಗಿರುವುದು ನಿಜ…
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಂಜನಗೂಡು ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ನರಸಿಂಹಸ್ವಾಮಿ ನನಗೆ ಒಳ್ಳೆಯ ಸ್ನೇಹಿತರು. ಹೀಗಾಗಿ ಚುನಾವಣಾ ಪ್ರಚಾರ ಮುಗಿದನಂತರ ಅವರ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಗೆ ಜೆಡಿಎಸ್ ಬೆಂಬಲ ನೀಡುವಂತೆ ಕೋರಿದ್ದೇನೆ ಎಂದು ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಚಾರ ಇಂದು ನಡೆಸಿದ ಸಿದ್ದರಾಮಯ್ಯ ಹೇಳಿದ್ದಾರೆ.[ರಾಜಕೀಯ ನಾಯಕರ ಸ್ವಾಗತಕ್ಕೆ ಖಾಲಿ ಕೊಡಗಳು!]

ನಾನು ಯಾರ ವಿರೋಧಿಯೂ ಅಲ್ಲ!
ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ವಿರೋಧಿ ಎಂಬ ಮಾತುಗಳು ಕೇಳಿ ಬರುತ್ತಿರುವುದಕ್ಕೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು ನಾನು ಯಾರ ವಿರೋಧಿಯೂ ಅಲ್ಲ. ಈ ರೀತಿಯ ಮಾತುಗಳನ್ನು ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರಕ್ಕಾಗಿ ಹುಟ್ಟು ಹಾಕಲಾಗಿದೆ. ನಾನು ಮಾನವೀಯತೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ, ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುತ್ತೇನೆಂದು ಸ್ಪಷ್ಟಪಡಿಸಿದರು.[ಮೈಸೂರಿನಲ್ಲಿ ಮುಖ್ಯಮಂತ್ರಿ: ಉಪಚುನಾವಣಾ ಕಣಕ್ಕೆ ಬಂತು ಕಳೆ]

ಅಧಿಕಾರಿಗಳಿಂದ ತೊಂದರೆ ಕ್ರಮಕ್ಕೆ ಶೋಭಾ ಮನವಿ
ಚುನಾವಣೆಗಾಗಿ ನಿಯೋಜಿಸಿರುವ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರಿಗೆ ಮತ್ತು ತಾರಾ ಪ್ರಚಾರಕರಿಗೆ ತೊಂದರೆ ನೀಡಿ ಬಿಜೆಪಿ ಚಿಹ್ನೆಯಿರುವ ಪ್ರಚಾರ ಸಾಮಾಗ್ರಿಗಳನ್ನು ಕಾರಣವಿಲ್ಲದೇ ವಶಪಡಿಸಿಕೊಂಡು ಕಮಲದ ಚಿಹ್ನೆಗೆ ಅವಮಾನ ಮಾಡಿದ್ದಾರೆ. ಅಧಿಕಾರಿಗಳು ಏಕಪಕ್ಷೀಯವಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತಿದ್ದು, ಚೆಕ್ ಪೋಸ್ಟ್ ನಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ತಕ್ಷಣವೇ ಬದಲಾಯಿಸಬೇಕೆಂದು ಇದೇ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.[ಉಪಚುನಾವಣೆಯಲ್ಲಿ ನಡೆಯುತ್ತಿದೆಯಾ ಅಕ್ರಮ?]

ಇಬ್ರಾಹಿಂ ಭಾಷಣಕ್ಕೆ ನಕ್ಕು ಸುಸ್ತಾದ ಜನರು
ಚತುರ ಮಾತುಗಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ, ಸಿಎಂ ಇಬ್ರಾಹಿಂ ಸಹ ಪ್ರಚಾರದಲ್ಲಿ ಭಾಗಿಯಾಗಿದ್ದು, ಎಂದಿನಂತೆ ತಮ್ಮ ಹಾಸ್ಯಶೈಲಿಯ ಮಾತುಗಳಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ಅನ್ನು ತಮ್ಮ ಶೈಲಿಯಲ್ಲಿ ಟೀಕಿಸಿ ಮನ್ ಕಿ ಬದಲಾಗಿ ಜನ್ ಕಿ ಬಾತ್ ಬೇಕು ಎಂದರು. ಬಿಜೆಪಿ ಮುಖಂಡರನ್ನು ತಮ್ಮದೇ ಧಾಟಿಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಟೀಕಿಸುತ್ತಾ ಸಭಿಕರಿಗೆ ಹಾಸ್ಯದ ರಸದೌತಣವನ್ನು ಉಣಬಡಿಸಿ ಬಿರು ಬಿಸಿಲಿನಿಂದ ಸುಸ್ತಾಗಿದ್ದವರಿಗೆ ನಗೆಯ ಟಾನಿಕ್ ನೀಡಿದರು.

ಪ್ರಚಾರಕ್ಕಿಳಿದ ಎಚ್.ವಿಶ್ವನಾಥ
ಇಷ್ಟು ದಿನ ಕಾಂಗ್ರೆಸ್ ಪಕ್ಷದ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಮುನಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರದಿಂದ ಪ್ರಚಾರದ ಅಖಾಡಕ್ಕಿಳಿದಿದ್ದಾರೆ.
ಮಾಜಿ ಸಂಸದ ಹೆಚ್.ವಿಶ್ವನಾಥ ನಂಜನಗೂಡು ಉಪ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಸಲುವಾಗಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೈಸೂರಿನಿಂದ ನಂಜನಗೂಡಿಗೆ ಪ್ರಯಾಣ ಬೆಳೆಸಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಇಂದಿನಿಂದ ಉಪ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ.












Click it and Unblock the Notifications